ಹಾನಗಲ್ಲ: ಕಡ್ಡಾಯವಾಗಿ ಪ್ರತಿ ತಿಂಗಳು 3 ನೇ ಶನಿವಾರ ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸಭೆ ನಡೆಸಿ, ಕಾಲೇಜಿನಲ್ಲಿ ಶೈಕ್ಷಣಿಕ ಪೂರಕ ವಾತಾವರಣ ಸೃಷ್ಟಿಸಲು ಗಮನ ಹರಿಸುವಂತೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.
ತಾಲೂಕಿನ ಅಕ್ಕಿಆಲೂರಿನ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಿತಿ ಸದಸ್ಯರ ಸಹಕಾರ ಪಡೆದು ಕಾಲೇಜಿನ ಅಭಿವೃದ್ಧಿಗೆ ಗಮನ ನೀಡಿ, ಕಾಲೇಜಿನ ಆಗು, ಹೋಗುಗಳ ಬಗ್ಗೆ ಸದಸ್ಯರೊಂದಿಗೆ ಚರ್ಚೆ ನಡೆಸಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಸಭೆಗೆ ಸಂಬಂಧಿಸಿದಂತೆ ನಾಲ್ಕೈದು ದಿನ ಮೊದಲೇ ಸದಸ್ಯರಿಗೆ ಮಾಹಿತಿ ನೀಡಿ ಎಂದು ಪ್ರಾಚಾರ್ಯ ವೀರೇಶ ಕುಮ್ಮೂರ ಅವರಿಗೆ ಸೂಚನೆ ನೀಡಿದರು.
ಕಾಲೇಜಿಗೆ ಅಗತ್ಯವಾಗಿ ಬೇಕಿರುವ ಸೌಲಭ್ಯಗಳನ್ನು ಪಟ್ಟಿ ಮಾಡಿ. ರೂ. ಒಂದು ಕೋಟಿ ವೆಚ್ಚದ ಸಮಗ್ರ ವರದಿಯೊಂದನ್ನು ಸಿದ್ಧಪಡಿಸಿ. ಕಾಲೇಜಿನಲ್ಲಿ ಈ ಹಿಂದೆ ಓದಿರುವ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರ ಮನವೊಲಿಸಿ. ನಾನೂ ಸಹ ಕೈ ಜೋಡಿಸಿ, ವೈಯಕ್ತಿಕವಾಗಿ ಆರ್ಥಿಕ ನೆರವು ಕಲ್ಪಿಸುವೆ. ಎಲ್ಲರೂ ಜೊತೆಗೂಡಿ ಅಭಿವೃದ್ಧಿಗೆ ಮುಂದಾಗೋಣ ಎಂದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಗರಿಷ್ಠ ಪ್ರಮಾಣದಲ್ಲಿದೆ. ಪಾಲಕರು, ವಿದ್ಯಾರ್ಥಿಗಳು ಕಾಲೇಜಿನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಉತ್ತಮ ಸೌಲಭ್ಯ ಕಲ್ಪಿಸಿ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ ಎಂದು ಸೂಚಿಸಿದರು.
ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರಾದ ಮೆಹಬೂಬ ಬ್ಯಾಡಗಿ, ಉಡುಚಪ್ಪ ಕರಬಣ್ಣನವರ, ಗುತ್ತೆಪ್ಪ ಸೈದಣ್ಣನವರ, ಅಲ್ತಾಫ್ ಶಿರಹಟ್ಟಿ, ಉಪನ್ಯಾಸಕಿ ಡಾ.ಯಮುನಾ ಕೋಣೇಸರ ಇದ್ದರು.
Kshetra Samachara
17/12/2024 06:25 pm