ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯೂರು : ಕಂದಾಯಗಳನ್ನ ಪ್ರಾಮಾಣಿಕವಾಗಿ ಕಟ್ಟಿದರೆ ಅಭಿವೃದ್ಧಿ ಸಾಧ್ಯ

ಹಿರಿಯೂರು : ನಗರದ ನಾಗರೀಕರು ಸಕಾಲದಲ್ಲಿ ತಮ್ಮಮನೆ ಹಾಗೂ ಕಟ್ಟಡಗಳ, ಅಂಗಡಿ ಮುಂಗಟ್ಟುಗಳ, ಹಾಗೂ ಉದ್ದಿಮೆಗಳ ಮತ್ತು ವಾಣಿಜ್ಯ ವ್ಯವಹಾರಗಳ ಕಂದಾಯಗಳನ್ನು ಪ್ರಾಮಾಣಿಕವಾಗಿ ನಗರಸಭೆಗೆ ಕಟ್ಟದರೆ ಮಾತ್ರ ನಗರದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂಬುದಾಗಿ ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್ ಹೇಳಿದರು.

ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ 2025-26 ನೇ ಸಾಲಿನ ಕರುಡು ಆಯವ್ಯಯ ತಯಾರಿಸುವ ಸಂಬಂಧ ಪೂರ್ವಭಾವಿಯಾಗಿ ಕರೆಯಲಾಗಿದ್ದ 2 ನೇ ಸುತ್ತಿನ ಸಾರ್ವಜನಿಕರ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.

ನಗರದಲ್ಲಿ ಅನೇಕ ವರ್ತಕರು, ಅಂಗಡಿ ಮುಂಗಟ್ಟುಗಳ ಮಾಲೀಕರು, ಹೋಟೆಲ್ ಉದ್ಯಮಿಗಳು, ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಲಕ್ಷಾಂತರ ರೂಗಳ ಕಂದಾಯವನ್ನು ಬಾಕಿ ಉಳಿಸಿಕೊಂಡಿದ್ದು, ಇದರಿಂದ ನಗರಸಭೆ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದಾಗಿ ಪ್ರಶ್ನಿಸಿದರಲ್ಲದೆ, ಈ ಎಲ್ಲಾ ಬಾಕಿ ವಸೂಲಿಯಾದರೆ ಸರ್ಕಾರದಿಂದ ನಮಗೆ ಯಾವುದೇ ಅನುದಾನ ಬೇಕಾಗಿಲ್ಲ ಎಂಬುದಾಗಿ ಅವರು ಸಭೆಗೆ ಹೇಳಿದರು.

ಮಾಜಿ ಉಪಾಧ್ಯಕ್ಷರು ಹಾಗೂ ಸದಸ್ಯರಾದ ಬಿ.ಎನ್.ಪ್ರಕಾಶ್ ಮಾತನಾಡಿ, ನಗರದ ಅಭಿವೃದ್ಧಿಯಾಗಬೇಕಾದರೆ ನಮ್ಮ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಕಟ್ಟುನಿಟ್ಟಾಗಿ, ನಿಸ್ಪಕ್ಷಪಾತವಾಗಿ ಕಂದಾಯ ವಸೂಲಿ ಮಾಡಬೇಕು, ಆದರೆ ಕೆಲವು ಅಧಿಕಾರಿಗಳು ಕಂದಾಯ ವಸೂಲಿಯಲ್ಲಿ ತಾರತಮ್ಯ ಮಾಡುವುದರಿಂದ ಸರಿಯಾಗಿ ಕಂದಾಯ ವಸೂಲಿ ಮಾಡಲಾಗುತ್ತಿಲ್ಲ ಎಂದರಲ್ಲದೆ,

ಕೆಲವು ಬಡಾವಣೆಗಳಲ್ಲಿ ಜನರು ಒಂದು ನಲ್ಲಿಗೆ ಅನುಮತಿ ಪಡೆದು 2 ಕಲಕ್ಷನ್ ನಲ್ಲಿಗಳನ್ನು ಮಾಡಿಸಿಕೊಳ್ಳುತ್ತಿದ್ದು, ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ, ಅವರಿಗೆ ದಂಡ ವಿಧಿಸುವ ಮೂಲಕ ಅಕ್ರಮ ನಲ್ಲಿಗಳನ್ನು ಸಕ್ರಮಗೊಳಿಸಿದರೆ ನಗರಸಭೆಗೆ ಸಾಕಷ್ಟು ನಲ್ಲಿ ಕಂದಾಯ ಬರುತ್ತದೆ, ಆವಾಗ ಮಾತ್ರ ನಗರದ ಅಭಿವೃದ್ಧಿ ಕೆಲಸಕಾರ್ಯಗಳನ್ನು ಮಾಡಲು ಸಹಾಯವಾಗುತ್ತದೆ ಎಂಬುದಾಗಿ ಹೇಳಿದರು.

ಮಾಜಿ ಉಪಾಧ್ಯಕ್ಷರು ಹಾಗೂ ಸದಸ್ಯರಾದ ಬಿ.ಎನ್.ಪ್ರಕಾಶ್ ರವರ ಮಾತಿಗೆ ಧ್ವಿನಿಗೂಡಿಸಿದ ಹಿರಿಯ ಸದಸ್ಯ ಎಂ.ಡಿ.ಸಣ್ಣಪ್ಪ ಮಾತನಾಡಿ, ಅಕ್ರಮ ನಲ್ಲಿಗಳನ್ನು ಪತ್ತೆ ಹಚ್ಚಿ ಸಕ್ರಮಗೊಳಿಸಿಸುವ ಜೊತೆಗೆ ನಗರದ ವಿವಿಧ ಬಡಾವಣೆಗಳ ಆಯಾ ವಾರ್ಡಿನ ಕೌನ್ಸಿಲರ್ ಗಳು ಮನೆಗಳ ಮಾಲೀಕರುಗಳ ಮನವೊಲಿಸಿ, ನಲ್ಲಿ ಕಂದಾಯ ಪಾವತಿಸುವ ಮೂಲಕ ನಗರಸಭೆಯ ಬಾಕಿ ಕಂದಾಯ ವಸೂಲಿಗೆ ಮುಂದಾಗಬೇಕು ಎಂಬುದಾಗಿ ಸಲಹೆ ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷ ವಿ.ಹೆಚ್.ರಾಜು ಮಾತನಾಡಿ, ನಗರದಲ್ಲಿ ಅಕ್ರಮ ನಲ್ಲಿಗಳ ಅಳವಡಿಕೆಗೆ ಕಡಿವಾಣ ಹಾಕುವ ಜೊತೆಗೆ ಫುಟ್ ಪಾತ್ ಹಾಗೂ ಬೀದಿಬದಿ ವ್ಯಾಪಾರಿಗಳಿಂದ ಸರಿಯಾಗಿ ಸುಂಕ ವಸೂಲಾತಿ ಮಾಡಬೇಕು, ಅಲ್ಲದೆ ನಗರದಲ್ಲಿ ಹೊಸ ಲೇಔಟ್ ಗಳ ನಿರ್ಮಾಣಕ್ಕೆ ಆದ್ಯತೆ ನೀಡಿ, ಅವರಿಂದ ಅಭಿವೃದ್ಧಿ ಶುಲ್ಕ ಪಡೆಯುವ ಮೂಲಕ ಆ ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸಾಧ್ಯವಾಗುತ್ತದೆ ಎಂಬುದಾಗಿ ಹೇಳಿದರು.

ನಗರಸಭೆ ನಾಮನಿರ್ದೇಶಕ ಸದಸ್ಯರಾದ ಗಿರೀಶ್ ಮಾತನಾಡಿ, ಕಂದಾಯ ವಸೂಲಿ ಕಾರ್ಯವು ಉತ್ತಮ ರೀತಿಯಲ್ಲಿ ನಡೆಯಬೇಕಾದರೆ ನಗರದ ಎಲ್ಲಾ ಬಡಾವಣೆಗಳ ಕಂದಾಯ ವಸೂಲಾತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಬೇಕು, ಅಲ್ಲದೆ ನಗರಸಭೆ ಸಿಬ್ಬಂದಿ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ವಾಣಿಜ್ಯ ಮಳಿಗೆಗಳ ಕಂದಾಯ ವಸೂಲಾತಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂಬುದಾಗಿ ಹೇಳಿದರು.

ಕರುನಾಡ ಸೇನೆ ಮಹೇಶ್ ಮಾತನಾಡಿ, ನಗರದ ಮುಖ್ಯರಸ್ತೆ ಸೇರಿದಂತೆ ಬಡಾವಣೆಗಳಳ್ಲಿ ಸ್ವಚ್ಛತೆ ಕಡಿಮೆಯಾಗಿದ್ದು, ಅದರಲ್ಲೂ ಸ್ಲಂ ಬಡಾವಣೆಗಳ ಪರಿಸ್ಥಿತಿ ಹೇಳತೀರದಾಗಿದೆ, ಅಂತಹ ಸ್ಲಂ ಬಡಾವಣೆಗಳನ್ನು ನಗರಸಭೆ ಆರೋಗ್ಯ ನಿರೀಕ್ಷಕರು ಗುರುತಿಸಿ, ಅವುಗಳ ಸ್ವಚ್ಛತೆ ಹಾಗೂ ಅಭಿವೃದ್ಧಿಯ ಕಡೆ ಹೆಚ್ಚು ಗಮನವನ್ನು ಹರಿಸುವ ಮೂಲಕ ಇಡೀ ನಗರವನ್ನು ಆರೋಗ್ಯವಂತ ನಗರವನ್ನಾಗಿ ಮಾಡಬಹುದು ಎಂಬುದಾಗಿ ಹೇಳಿದರು.

ಹಿರಿಯ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ ಮಾತನಾಡಿ, ನಗರಸಭೆಗೆ ಉತ್ಸಾಹಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಇದ್ದು, ಇದೀಗ ನಗರಸಭೆಗೆ ಯುವಕರು, ಕ್ರೀಯಾಶೀಲರು, ಉತ್ಸಾಹಿಗಳು ಆದ ವಾಸೀಂ ರಂತಹ ಪೌರಾಯುಕ್ತರು ಸಹ ನಗರಸಭೆಗೆ ಆಗಮಿಸಿರುವುದು ಸಂತಸದ ವಿಚಾರವಾಗಿದ್ದು, ನಗರಸಭೆ ಪೌರಾಯುಕ್ತರು ಹಾಗೂ ಅಧಿಕಾರಿಗಳು ಸಂಪನ್ಮೂಲಗಳ ಕ್ರೋಢೀಕರಣ ಮಾಡುವ ಬಗ್ಗೆ ಕ್ರಮವಹಿಸುವ ಮೂಲಕ ನಗರದ ಅಭಿವೃದ್ಧಿ ಮಾಡಬೇಕು ಎಂದರಲ್ಲದೆ,

ನಗರದಲ್ಲಿ ನೆಹರು ಮೈದಾನದ ಪಾರ್ಕ್ ಸೇರಿದಂತೆ ಹಲವಾರು ಪಾರ್ಕ್ ಗಳು ಹಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ, ಇದಕ್ಕೆ ಕಡಿವಾಣ ಹಾಕುವ ಮೂಲಕ ಪಾರ್ಕ್ ಗಳಿಗೆ ಉಸ್ತುವಾರಿ ಗಳನ್ನು ನೇಮಿಸಬೇಕು, ಅಲ್ಲದೆ ನಗರದ ತಳ್ಳುಗಾಡಿಗಳಲ್ಲಿ ಪಾನಿಪೂರಿಯಂತಹ ತಿಂಡಿಗಳನ್ನು ಮಾರುತ್ತಿರುವ ವ್ಯಾಪಾರಿಗಳಿಗೆ ಒಂದು ವ್ಯವಸ್ಥಿತ ಜಾಗ ಗೊತ್ತು ಮಾಡಿ ಫುಡ್ ಕೋರ್ಟ್ ಮಾದರಿಯಲ್ಲಿ ಸ್ಯಾಕ್ಸ್ ಸ್ಟ್ರೀಟ್ ವ್ಯವಸ್ಥೆ ಮಾಡಿಕೊಡಬೇಕು ಎಂಬುದಾಗಿ ಹೇಳಿದರು.

ಈ ಎಲ್ಲಾ ವಿಷಯಗಳನ್ನು ಆಲಿಸಿದ ಪೌರಾಯುಕ್ತರಾದ ಎ.ವಾಸೀಂರವರು ಅಂತಿಮವಾಗಿ ಮಾತನಾಡಿ, ನಮ್ಮ ಕರೆಗೆ ಓಗೊಟ್ಟು ಈ ಆಯವ್ಯಯ ಪೂರ್ವಭಾವಿ ಸಭೆಗೆ ನಗರಸಭೆ ಸದಸ್ಯರು, ನಗರದ ನಾಗರೀಕರು, ಹಿರಿಯ ಪತ್ರಕರ್ತರು ಆಗಮಿಸಿ, ಹಲವಾರು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ, ಅವರಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಾ, ಮುಂದಿನ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಈ ಸಾಲಿನ ಬಜೆಟ್ ನಲ್ಲಿ ನಗರದ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸಲಾಗುವುದು ಎಂಬುದಾಗಿ ಸಭೆಗೆ ಹೇಳಿದರು.

ಈ ಸಭೆಯಲ್ಲಿ ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್, ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾ ಆರಾಧ್ಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ಪೌರಾಯುಕ್ತರಾದ ಎ.ವಾಸೀಂ, ನಾಮನಿರ್ದೇಶನ ಸದಸ್ಯರಾದ ಬಿ.ಎನ್.ಪ್ರಕಾಶ್, ಗಿರೀಶ್ ಕುಮಾರ್, ಜಗದೀಶ್, ರಮೇಶ್ ಬಾಬು, ನಗರಸಭೆ ವ್ಯವಸ್ಥಾಪಕಿ ಶ್ರೀಮತಿ ಮಂಜುಳ,ಲೆಕ್ಕ ಅಧೀಕ್ಷರಾದ ಗೋವಿಂದರಾಜು, ಲೆಕ್ಕಾಧಿಕಾರಿ ಜನಾರ್ಧನ್, ಎಇಇ ರಾಜು, ಆರೋಗ್ಯ ನಿರೀಕ್ಷಕರಾದ ಸಂಧ್ಯಾ, ಮೀನಾಕ್ಷಿ, ಸೇರಿದಂತೆ ನಗರಸಭೆ ನೌಕರರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

14/12/2024 08:40 am

Cinque Terre

1.36 K

Cinque Terre

0

ಸಂಬಂಧಿತ ಸುದ್ದಿ