ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತ (ಕೆಎಸ್‌ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ನಿಗಮದ ಅಧ್ಯಕ್ಷ ವಿರೂಪಾಕ್ಷಪ್ಪ ಮಾಡಾಳ್ ಪುತ್ರ ಎಂ.ವಿ. ಪ್ರಶಾಂತ್‌ಕುಮಾರ್ ಲಂಚಾವತಾರ ಬಹಿರಂಗಗೊಂಡಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ ಪ್ರಶಾಂತ್‌ಕುಮಾರ್ ರಾಸಾಯನಿಕ ಪೂರೈಕೆದಾರರಿಂದ 90 ಲಕ್ಷ ಲಂಚ ಪಡೆದಿರುವುದು ದೃಢಪಟ್ಟಿದೆ ಎಂದು ಲೋಕಾಯುಕ್ತ ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಜಲಮಂಡಳಿ ಅಧಿಕಾರಿ ಪ್ರಶಾಂತ್ ಕುಮಾರ್ ಅಲಿಯಾಸ್ ಪ್ರಶಾಂತ್ ಮಾಡಾಳ್, ಮೆಸರ್ಸ್ ಕರ್ನಾಟಕ ಅರೋಮಾಸ್ ಕಂಪನಿಯ ಮೂವರು ಸಿಬ್ಬಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿಗಳು, ಲಂಚ ಸ್ವೀಕರಿಸಲು ಯತ್ನಿಸಿದ್ದರ ಕುರಿತ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಆರೋಪಿ ಪ್ರಶಾಂತ್ ಮಾಡಾಳ್, ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ತಂದೆ ಮಾಡಾಳ್ ವಿರೂಪಾಕ್ಷಪ್ಪ ಅವರ ಹೆಸರು ಬಳಸಿ ಟೆಂಡರ್ ಪ್ರಕ್ರಿಯೆಯಲ್ಲಿ ಪ್ರಭಾವ ಬೀರಿರುವುದು ಬಯಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅರೋಮಾಸ್ ಕಂಪನಿ ಮಾಲೀಕರಿಗೆ ವಾಟ್ಸಾಪ್ ಸಂದೇಶಗಳನ್ನು ಕಳಿಸಿರುವ ಪ್ರಶಾಂತ್ ಅವರ ಚಾಟ್ ರಿಟ್ರೀವ್ ಮಾಡಲಾಗಿದೆ. ಇದರಲ್ಲಿ ಆರೋಪಿಯ ಲಂಚಾವತಾರ ಬಯಲಾಗಿದೆ. ಅರೋಮಾಸ್ ಕಂಪನಿ ಮಾಲೀಕ ವಿನಯ್‌ರಾಜ್, ಬೇರೆ ಕಂಪನಿಯ ಸ್ಯಾಂಪಲ್ ತಿರಸ್ಕರಿಸುವಂತೆ ಪ್ರಶಾಂತ್‌ಗೆ ವಾಟ್ಸಾಪ್ ಸಂದೇಶ ಕಳಿಸಿದ್ದರು. ಇದಾದ ನಂತರ ಕೆಎಸ್‌ಡಿಎಲ್ ಎಂ.ಡಿ ಡಾ.ಮಹೇಶ್ ಅವರಿಗೆ ವಾಟ್ಸಾಪ್ ಮೂಲಕ ‘ದಯವಿಟ್ಟು ಎಸ್‌ಪಿ ಕಂಪನಿಯ ಸುಗಂಧದ್ರವ್ಯ ತಿರಸ್ಕರಿಸಿ’ ಎಂದು ಸಂದೇಶ ಕಳಿಸಿದ್ದಾರೆ. ಈ ಸಂದೇಶಗಳು ಆರೋಪಿ ಪ್ರಶಾಂತ್‌ಕುಮಾರ್, ಕೆಎಸ್‌ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಪ್ರಭಾವ ಬೀರಿದ್ದನ್ನು ಸಾಬೀತು ಮಾಡಿದೆ ಎಂದು ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿ ಸಾಕ್ಷಿ ಸಲ್ಲಿಕೆ ಮಾಡಿದ್ದಾರೆ.
PublicNext
07/12/2024 03:22 pm