ಉಡುಪಿ: ನವಜಾತ ಶಿಶುಗಳಿಗೆ ಕಾಲಕಾಲಕ್ಕೆ ನೀಡುವ ಸಾರ್ವತ್ರಿಕ ಲಸಿಕೆಗಳನ್ನು ತಪ್ಪದೇ ಹಾಕಿಸಲು ತಾಯಂದಿರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿ. ಅವರು ತಮ್ಮ ಮಕ್ಕಳಿಗೆ ಎಲ್ಲಾ ನಿಗದಿತ ಲಸಿಕೆಗಳನ್ನು ತಪ್ಪದೇ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತಾಯಿ ಮರಣ ತನಿಖಾ ಸಮಿತಿ ಸಭೆ, ಜಿಲ್ಲಾ ಲಸಿಕಾ ಕಾರ್ಯಪಡೆ ಸಮಿತಿ ಸಭೆ ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಮಕ್ಕಳಿಗೆ ನೀಡುವ ನಿಗದಿತ ಲಸಿಕೆ ನೀಡುವ ಪ್ರಮಾಣ ತೀರಾ ಕಡಿಮೆ ಇದೆ. 5 ವರ್ಷದವರೆಗಿನ ಮಕ್ಕಳಿಗೆ ಶೇ.87.24ರಷ್ಟು, 10 ವರ್ಷದ ವರೆಗಿನ ಮಕ್ಕಳಿಗೆ ಶೇ. 62.16ರಷ್ಟು ಹಾಗೂ 16 ವರ್ಷದವರೆಗಿನ ಮಕ್ಕಳಿಗೆ ಶೇ.55.43 ರಷ್ಟು ಮಾತ್ರ ಲಸಿಕೆ ನೀಡಲಾಗಿದೆ. ಇದು ತೀರಾ ಕಡಿಮೆ ಪ್ರಮಾಣ ಆಗಿದ್ದು, ಇದರಲ್ಲಿ ಪ್ರತಿಶತಃ ನೂರರಷ್ಟು ಸಾಧನೆ ಆಗಬೇಕಾಗಿದೆ ಎಂದವರು ಹೇಳಿದರು.
ಗರ್ಭಿಣಿ ಮಹಿಳೆಯರಿಗೆ ಆರಂಭದಲ್ಲಿಯೇ ತಾಯಿಕಾರ್ಡ್‌ನ್ನು ನೀಡುವುದರೊಂದಿಗೆ ಕಾಲಕಾಲಕ್ಕೆ ಅವರ ಆರೋಗ್ಯ ತಪಾಸಣೆ ನಡೆಸಬೇಕು. ಜೊತೆಗೆ ಪೌಷ್ಠಿಕ ಆಹಾರಗಳ ಸೇವನೆ ಸೇರಿದಂತೆ ವಿವಿಧ ಮಾಹಿತಿಗಳನ್ನು ಅವರಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
Kshetra Samachara
04/12/2024 08:15 pm