ಬೀದರ್ : ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಬದುಕಿಗೆ ಆಸರೆಯಾದ ಮೂತ್ರಪಿಂಡ ಕಸಿ (ಡಯಾಲಿಸಿಸ್)ಗೆ ಔರಾದ್ ತಾಲ್ಲೂಕು ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೇ ತಾಲ್ಲೂಕಿನ ಅನೇಕ ರೋಗಿಗಳು ಪರದಾಡುತ್ತಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರ ಇದ್ದರೂ ಅವು ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತೆ.
ಒಂದು ಪೂರ್ಣ ಹಾಳಾಗಿ ಮೂಲೆಗೆ ಸೇರಿದರೆ, ಇನ್ನೊಂದು ಸರಿಯಾಗಿ ಕೆಲಸ ಮಾಡದ ಕಾರಣ ರೋಗಿಗಳು ತಾಲ್ಲೂಕು ಬಿಟ್ಟು ಬೇರೆ ಬೇರೆ ಆಸ್ಪತ್ರೆಗೆ ಅಲೆಯಬೇಕಾಗಿದೆ.
ನಾನು ಕಳೆದ ನಾಲ್ಕು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದೇನೆ. ಆರಂಭದ ಒಂದು ವರ್ಷ ಹೊರತುಪಡಿಸಿದರೆ ಇಲ್ಲಿ ಸರಿಯಾಗಿ ಡಯಾಲಿಸಿಸ್ ವ್ಯವಸ್ಥೆ ಇಲ್ಲ. ಬೀದರ್ ಸಾರ್ವಜನಿಕ ಆಸ್ಪತ್ರೆಗೆ ಹೋದರೆ ನಮ್ಮಲ್ಲಿ ರೋಗಿಗಳು ಜಾಸ್ತಿ ಇದ್ದಾರೆ. ನಿಮ್ಮ ತಾಲ್ಲೂಕಿಗೆ ಹೋಗಿ ಎಂದು ಅವರು ವಾಪಸ್ ಕಳುಹಿಸುತ್ತಿದ್ದಾರೆ. ಹೀಗಾಗಿ ನಾನು ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಂಡು ಬದುಕುತ್ತಿದ್ದೇನೆ. ಬದುಕಿನೂದ್ದಕ್ಕೂ ಗಳಿಸಿದ ಹಣವೆಲ್ಲ ಅದಕ್ಕೆ ಹೋಗಿದೆ ಎಂದು ಪಟ್ಟಣದ ಬಳೆ ವ್ಯಾಪಾರಿ ಶಾಮದಮಿಯ್ಯಾ ಗೋಳು ತೋಡಿಕೊಂಡರು.
ನನಗೆ ಬಿಪಿ-ಶುಗರ್ ಇಲ್ಲ. ಯಾವುದೇ ವ್ಯಸನವೂ ಇಲ್ಲ. ಆದರೂ ನನಗೆ ಕಿಡ್ನಿ ಸಮಸ್ಯೆಯಾಗಿದೆ. ನಾಲ್ಕು ತಿಂಗಳ ಹಿಂದೆಯೇ ಔರಾದ್ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್ ಮಾಡಿಸಲು ಹೆಸರು ನೋಂದಾಯಿಸಿದ್ದೇನೆ. ಆದರೆ ಇಂದಿಗೂ ನನಗೆ ಕರೆದಿಲ್ಲ. ಕೇಳಿದರೆ ಯಂತ್ರ ಕೆಟ್ಟು ಹೋಗಿದೆ ಎನ್ನುತ್ತಾರೆ. ಹೀಗಾಗಿ ನನಗೆ ಈಗ ಖಾಸಗಿ ಆಸ್ಪತ್ರೆಯೇ ಅನಿವಾರ್ಯವಾಗಿದೆ' ಎನ್ನುತ್ತಾರೆ ಚಿಂತಾಕಿ ಗ್ರಾಮದ ನಿವಾಸಿ ಬಸವರಾಜ.
Kshetra Samachara
29/11/2024 04:20 pm