ಬೆಂಗಳೂರು : ಸಂವಿಧಾನವನ್ನು ಅಲುಗಾಡಿಸುವ ಪ್ರಯತ್ನವನ್ನು ಕೋಮುವಾದಿ, ಮೂಲಭೂತವಾದಿ, ಜಾತಿವಾದಿಗಳು ನಡೆಸುತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ವಿರೋಧಿಸುತ್ತಿದ್ದಾರೆ. ಜನರ ಮನನ್ಸುಗಳ ವಿರುದ್ದ ದಬ್ಬಾಳಿಕೆ ಮತ್ತು ಸರ್ವಾಧಿಕಾರ ಧೋರಣೆ ನಡೆಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸಂವಿಧಾನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಭಾರತದ ಸಂವಿಧಾನ ಈ ನೆಲದ ಸಂಸ್ಕೃತಿ, ಜೀವನ, ಆಚಾರ, ವಿಚಾರಗಳನ್ನು ಬಿಂಬಿಸುತ್ತದೆ.
ಜೀವನದ ಮೌಲ್ಯ, ಬದುಕು ಮತ್ತು ಭಾರತದ ಭವಿಷ್ಯ ಮುಖ್ಯ ಎಂದು ಸಂವಿಧಾನ ಒತ್ತಿ ಹೇಳುತ್ತದೆ. ವಿಶ್ವದ ಅನೇಕ ದೇಶಗಳ ಸಂವಿಧಾನ, ಹೋರಾಟ, ಕ್ರಾಂತಿ ಮತ್ತು ಚಳುವಳಿಗಳ ಅಧ್ಯಯನ ನಡೆಸಿ ಅಂಬೇಡ್ಕರ್‌ರವರು ಭಾರತವನ್ನು ಜಾತಿವಾದ, ಮತೀಯವಾದ, ಧರ್ಮಬೇಧಗಳಿಂದ ಮುಕ್ತಗೊಳಿಸಬೇಕು ಎಂದು ಸಮಗ್ರ ಸಂವಿಧಾನವನ್ನು ಭಾರತೀಯರಿಗೆ ನೀಡಿದರು ಎಂದು ಶ್ಲಾಘಿಸಿದರು.
ಆದ್ರೆ ಅಂಬೇಡ್ಕರ್ ಬಯಸಿದ್ದ ಸಂವಿಧಾನದ ಆಶಯಗಳು, ಆಶೋತ್ತರಗಳು ಇನ್ನೂ ಸಹ ಅನುಷ್ಠಾನವಾಗಿಲ್ಲ. ಸಂವಿಧಾನವನ್ನು ವಿರೋಧಿಸುವ ದೊಡ್ಡ ವರ್ಗ ಅಸ್ತಿತ್ವದಲ್ಲಿರುವುದರಿಂದ ಅಂಬೇಡ್ಕರ್ ಕಂಡ ಭಾರತ ಇನ್ನೂ ನಿರ್ಮಾಣವಾಗಿಲ್ಲ. ಧರ್ಮ,ಮನುವಾದದ ಮೂಲಕ ನಮ್ಮನ್ನು ನಿಯಂತ್ರಿಸುವ ಶಕ್ತಿಗಳು ಹೆಚ್ಚಾಗುತ್ತಿದೆ. ಸಮಾಜವಾದ,ಜಾತ್ಯತೀತ ಎಂಬ ನೆಲೆಗಟ್ಟಿನಲ್ಲಿ ರಚಿತವಾಗಿರುವ ಸಂವಿಧಾನದ ತಳಹದಿಯನ್ನು ಅಲುಗಾಡಿಸುವ ಪ್ರಯತ್ನಗಳು ನಡೆಯುತ್ತಿದೆ. ಸಂವಿಧಾನ ಬದಲಾವಣೆ ಮಾಡಲು ಹುನ್ನಾರ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕುಲಪತಿಗಳು ಡಾ.ಜಯಕರ ಎಸ್.ಎಂ,ಕುಲಸಚಿವರು ಶೇಕ್ ಲತೀಫ್,ದಲಿತ ಮುಖಂಡ ಬಿ.ಗೋಪಾಲ್,ನಿರ್ದೇಶಕರು ಪ್ರೊ.ಹೊನ್ನು ಸಿದ್ದಾರ್ಥ, ಸಿಂಡಿಕೇಟ್ ಸದಸ್ಯರು ಗಂಗರಾಜು,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕ ಪ್ರೊ.ಜಯರಾಮ್ ನಾಯ್ಕ್, ಪ್ರೊ.ಹೆಚ್.ಆರ್.ರವೀಶ್,ಪ್ರೊ.ನಾಗೇಶ್ ಪಿ.ಸಿ ಸೇರಿದಂತೆ ಸಾಕಷ್ಟು ವಿದ್ಯಾರ್ಥಿ, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
PublicNext
26/11/2024 08:08 pm