ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್‌ಡಿಎ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಇದರಿಂದ ಜೆಡಿಎಸ್ ಕಂಗಾಲಾಗಿದೆ. ಎಲ್ಲ ರಾಜಕೀಯ ರಣತಂತ್ರಗಳು ಫೇಲ್ ಆದ ಬಗ್ಗೆ ಜೆಡಿಎಸ್‌ಗೆ ಆತಂಕ ಕಾಡುತ್ತಿದೆ. ಈ ನಡುವೆ ಈ ಗೆಲುವಿನ ಮೂಲಕ ಡಿಕೆ ಸಹೋದರರು ಜೆಡಿಎಸ್‌ನ ಭದ್ರಕೋಟೆಗೆ ಲಗ್ಗೆ ಇಟ್ಟಿದ್ದು ಒಕ್ಕಲಿಗ ನಾಯಕರು ಕಾಂಗ್ರೆಸ್‌ನತ್ತ ಆಕರ್ಷಿತರಾಗುವ ಆತಂಕ ಜೆಡಿಎಸ್‌ಗೆ ಕಾಡುತ್ತಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಕುಮಾರಸ್ವಾಮಿಗೆ ಚನ್ನಪಟ್ಟಣದ ಜೆಡಿಎಸ್ ನಾಯಕರನ್ನು ಹಿಡಿದಿಡುವ ಸವಾಲು ಎದುರಾಗಿದೆ. ಜೆಡಿಎಸ್ ಹಿರಿಯ ನಾಯಕ, ಶಾಸಕ ಜಿ.ಟಿ ದೇವೇಗೌಡ ಈಗಾಗಲೇ ಪಕ್ಷದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಅವರು ಕಾಂಗ್ರೆಸ್ಗೆ ಸೇರುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳೂ ಹರಿದಾಡಲು ಆರಂಭವಾಗಿದೆ. ಇಂಥ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮೇಲಿದೆ.
ನಿಖಿಲ್ ಸೋಲಿನಿಂದ ಕುಮಾರಸ್ವಾಮಿ ರಾಮನಗರ ಜಿಲ್ಲೆಯಲ್ಲಿ ಅಧಿಕಾರದಿಂದ ದೂರ ಉಳಿದಂತಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ, ಸವಾಲು ಕುಮಾರಸ್ವಾಮಿಗೆ ಎದುರಾಗಲಿದೆ.
PublicNext
24/11/2024 07:48 pm