ಬೀದರ್: ವಕ್ಫ್ ವಿರುದ್ಧ ಒಂದು ಕಡೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಂಡ ರಚಿಸಿದ್ದಾರೆ. ಮತ್ತೊಂದೆಡೆ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅವರ ತಂಡ ಪ್ರತ್ಯೇಕ ಹೋರಾಟಕ್ಕೆ ಮುಂದಾಗಿದೆ. ಆದರೆ, ಇದೀಗ ಈ ಎರಡೂ ಬಣಗಳಿಗೆ ಹಿನ್ನಡೆಯಾಗಬಹುದು ಎಂದು ಹೇಳಲಾಗುತ್ತಿದೆ.
ವಕ್ಫ್ ವಿವಾದ ಸಂಬಂಧ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿ ನಾಯಕರು ಕಾಂಗ್ರೆಸ್ ಆಡಳಿತದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೆಲ ಗ್ರಾಮಗಳ ರೈತರ ಜಮೀನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ಇದ್ದು, ಇದನ್ನು ಖಂಡಿಸಿ ಸರ್ಕಾರದ ವಿರುದ್ಧ ಇದೀಗ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾಡಿನ ರೈತರಿಗೆ ಮೋಸ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ.
ಇತ್ತ ಯತ್ನಾಳ್ ಆ್ಯಂಡ್ ಟೀಂ ಪ್ರತ್ಯೇಕ ಹೋರಾಟ ಹಮ್ಮಿಕೊಂಡಿದೆ. ಯತ್ನಾಳ್ ಟೀಂ ಬೀದರ್‌ನಿಂದ ಚಾಮರಾಜನಗರದವರೆಗೆ ಹೋರಾಟ ಜಾಥಾ ಹಮ್ಮಿಕೊಂಡಿದೆ. ಈ ನಡುವೆ 3 ತಂಡವಾಗಿ ವಕ್ಫ್ ವಿರುದ್ಧ ಬಿ.ವೈ. ವಿಜಯೇಂದ್ರ ತಂಡ ಜಾಗೃತಿ ಹೋರಾಟ ಹಮ್ಮಿಕೊಂಡಿದೆ. ಒಂದೇ ವಿಚಾರವಾಗಿ ಪಕ್ಷದಲ್ಲಿ ನಡೆಯುವ ಎರಡು ತಂಡಗಳ ಹೋರಾಟ ಸಾರ್ವಜನಿಕವಾಗಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಾಳೆ ಗಡಿ ಜಿಲ್ಲೆ ಬೀದರ್‌ನಲ್ಲಿ ಯತ್ನಾಳ್ ನೇತೃತ್ವದಲ್ಲಿ ವಕ್ಫ್ ಹೋರಾಟ ಆರಂಭವಾಗಲಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಹೋರಾಟಕ್ಕೆ ಸ್ಥಳೀಯ ಬಿಜೆಪಿ ಶಾಸಕರೇ ಸಾಥ್ ಕೊಡೋದು ಬಹುತೇಕ ಡೌಟ್ ಎಂದು ಹೇಳಲಾಗುತ್ತಿದೆ. ಶಾಸಕರಾದ ಶರಣು ಸಲಗರ್, ಶೈಲೇಂದ್ರ ಬೆಲ್ದಾಳೆ, ಪ್ರಭು ಚೌಹಾಣ್ ಪ್ರತಿಭಟನೆಯಲ್ಲಿ ಭಾಗಿಯಾಗೋದು ಅನುಮಾನ ಅಂತಲೇ ಹೇಳಲಾಗಿದೆ. ಈ ಮೂವರು ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಯತ್ನಾಳ್ ನೇತೃತ್ವದ ವಕ್ಪ್ ಹೋರಾಟಕ್ಕೆ ಬೆಂಬಲ ನೀಡುವುದು ಬಹುತೇಕ ಡೌಟ್ ಅಂತಲೇ ಹೇಳಲಾಗಿದೆ.
ವಿಜಯೇಂದ್ರ ಮಾಡಿರುವ ಮೂರು ಟೀಮ್‌ಗೆ ಅಪ್ಪ-ಅಮ್ಮ ಇಲ್ಲವೆಂಬ ಯತ್ನಾಳ್ ಟೀಂ ಹೇಳಿಕೆಗೆ ಕೌಂಟರ್ ಕೊಟ್ಟಿರುವ ಶಾಸಕ ಸಲಗರ್, ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಅನಾಥವಾಗಿದೆ. ಮಾಜಿ ಎಂಎಲ್‌ಸಿ, ಮಾಜಿ ಎಂಪಿ ಹಾಗೂ ಮನೆಯಲ್ಲಿ ಕುಳಿತುಕೊಂಡವರನ್ನು ಟೀಂಗೆ ಸೇರಿಸಿದ್ದಾರೆ. ಹೀಗಾಗಿ, ಈ ತಂಡಕ್ಕೆ ತಾಯಿ-ತಂದೆ ಯಾರು ಇಲ್ಲ. ನಮ್ಮ ಟೀಂಗೆ ನಿಜವಾಗಿಯೂ ತಂದೆ-ತಾಯಿಗಳಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ ಸೇರಿ ಹಲವರ ವಿರುದ್ಧ ಕಿಡಿಕಾರಿದ್ದಾರೆ.
PublicNext
24/11/2024 09:32 pm