ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನ.27ರಿಂದ ಡಿ.12ರ ತನಕ ನೆರವೇರಲಿದೆ. ಜಾತ್ರೋತ್ಸವದ ನಿಮಿತ್ತ ಕ್ಷೇತ್ರದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರವು ನ.25ರಿಂದ ಡಿ.12ರ ತನಕ ನೆರವೇರುವುದಿಲ್ಲ. ಆದರೆ ಇತರ ಸೇವೆಗಳು ಎಂದಿನಂತೆ ನೆರವೇರುತ್ತದೆ.
ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವು ಸೇವೆಗಳು ನೆರವೇರುವುದಿಲ್ಲ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
ಲಕ್ಷದೀಪೋತ್ಸವ (ನ.30), ಚೌತಿ (ಡಿ.5), ಪಂಚಮಿ (ಡಿ.6) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ (ಡಿ.7) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ, ಚಂಪಾಷಷ್ಠಿ ದಿನ ಆಶ್ಲೇಷಾ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ. ನ.30, ಡಿ.5, ಡಿ.6, ಡಿ.7 ಮತ್ತು ಡಿ.12ರಂದು ಪಂಚಾಮೃತ ಮಹಾಭಿಷೇಕ ಸೇವೆ ನಡೆಯುವುದಿಲ್ಲ. ನ.27ರಿಂದ ಡಿ.12ರ ತನಕ ಸಾಯಂಕಾಲದ ಆಶ್ಲೇಷಾ ಬಲಿ ಸೇವೆ ನೆರವೇರುವುದಿಲ್ಲ.
ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ನ.26ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪವಿತ್ರ ಕಾರ್ಯದ ಕಾರಣ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ಶ್ರೀ ದೇವರ ದರುಶನ ಹಾಗೂ ಸೇವೆಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ. 2 ಗಂಟೆಯ ಬಳಿಕ ಶ್ರೀ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು . ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ.
Kshetra Samachara
24/11/2024 07:40 pm