ಬೆಳ್ತಂಗಡಿ: ಅದು ಪಶ್ಚಿಮ ಘಟ್ಟದ ತಪ್ಪಲಿನ ಊರು. ಕಾಡಿನ ತಪ್ಪಲಿನ ಪ್ರದೇಶವೆಂದರೆ ವನ್ಯಜೀವಿಗಳ ಉಪಟಳ ಇದ್ದೇ ಇರುತ್ತದೆ. ಆದರೆ ಈ ಊರಿನಲ್ಲಿ, ವಿವಿಧ ಅಭಿವೃದ್ಧಿ ಯೋಜನೆಗಳ ಕಾರಣದಿಂದ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಇದು ಆ ಊರಿನ ಜನರನ್ನು ಭೀತಿಗೆ ತಳ್ಳಿದೆ.
ಇದು ಬೆಳ್ತಂಗಡಿ ತಾಲೂಕಿನ ಶಿಬಾಜೆ ಎಂಬ ಪುಟ್ಟ ಊರಿನ ವ್ಯಥೆಯ ಕಥೆ. ಈ ಊರಿನಲ್ಲಿ ಹಿಂದೆಯೂ ಕಾಡಾನೆಗಳ ಉಪಟಳವಿತ್ತು. ಆದರೆ ಐದು ವರ್ಷಗಳ ಈಚೆಗೆ ಅದು ಇನ್ನೂ ಹೆಚ್ಚಾಗಿದೆ ಅನ್ನೋದು ಊರವರ ವಾದ. ಈ ಊರಿನ ಪಕ್ಕದಲ್ಲಿಯೇ ಶಿರಾಡಿ ಘಾಟ್ ಇದೆ. ಇಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಜೊತೆಗೆ ನೀರಾವರಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳು, ಊರಿನ ಪಕ್ಕವೇ ಸಾಗಿ ಹೋಗುತ್ತಿದೆ. ಇದರಿಂದ ಕಾಡಾನೆಗಳ ಸಂಚಾರದ ಪಥ ಬದಲಾಗಿ ಊರಿನ ಪಕ್ಕದಲ್ಲೇ ಆನೆಗಳ ಹಿಂಡು ಬೀಡುಬಿಟ್ಟಿದೆ ಎಂದು ಊರವರು ಹೇಳುತ್ತಾರೆ.
ಇತ್ತೀಚೆಗೆ ಶಿಬಾಜೆಯ ಕಲ್ಲಾಜೆ ನಿವಾಸಿಯೊಬ್ಬರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಕಾಡಾನೆಯೊಂದು ಎದುರಾಗಿತ್ತು. ಆನೆ ದಾಳಿಯಿಂದ ತಪ್ಪಿಸಲು ಹೋಗಿ ತಂದೆ ಹಾಗೂ ಇಬ್ಬರು ಮಕ್ಕಳಿಗೆ ಗಾಯವಾಗಿತ್ತು. ಕಾಡಾನೆಗಳ ಭೀತಿಯಿಂದ ಜನಸಂಚಾರಕ್ಕೂ, ವಾಹನ ಸಂಚಾರಕ್ಕೂ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಉಪಟಳ ಈ ಊರಿನ ಜನರನ್ನು ಜೀವ ಕೈಯಲ್ಲಿ ಹಿಡಿದು ಬದುಕುವಂತೆ ಮಾಡಿದೆ. ಆದ್ದರಿಂದ ಕಾಡಾನೆಗಳಿಂದ ರಕ್ಷಿಸಿ ಎಂದು ಅರಣ್ಯ ಇಲಾಖೆಯನ್ನು ಬೇಡುವ ಪರಿಸ್ಥಿತಿ ಇಲ್ಲಿನವರಿಗೆ ಎದುರಾಗಿದೆ.
ಅರಣ್ಯ ಇಲಾಖೆ ಸೋಲಾರ್ ಬೇಲಿ ನಿರ್ಮಿಸುವ ಭರವಸೆಯನ್ನು ಊರಿನವರಿಗೆ ನೀಡಿದೆ. ಅದು ಯಾವಾಗ ಸಾಕಾರ ಆಗುತ್ತೋ ಗೊತ್ತಿಲ್ಲ. ಆದಷ್ಟು ಬೇಗ ಅರಣ್ಯ ಇಲಾಖೆ ಈ ಕಾರ್ಯ ಪೂರ್ಣಗೊಳಿಸಿದರೆ, ಈ ಊರಿಗೆ ಕಾಡಾನೆಯ ಉಪಟಳದಿಂದ ಮುಕ್ತಿ ದೊರಕಬಹುದು.
PublicNext
24/11/2024 08:40 am