ಬೆಂಗಳೂರು: ದೇವೇಗೌಡರು ರಾಜಕೀಯ ನಿವೃತ್ತಿ ಘೋಷಿಸಲಿ ಎಂಬ ಸಿಪಿ ಯೋಗೇಶ್ವರ್ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಾಜಿ ಪ್ರಧಾನಿಗಳಾದ ದೇವೇಗೌಡರು ಅಧಿಕಾರಕ್ಕಾಗಿ ಎಂದೂ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಇದನ್ನು ಆ ವ್ಯಕ್ತಿ ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿ ಕಾರಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈಗ ದೇವೆಗೌಡರ ವಯಸ್ಸು 92 ವರ್ಷ. ದೇಶ ಮತ್ತು ರಾಜ್ಯ ಕಟ್ಟಲು ಅವರ ಮಾರ್ಗದರ್ಶನ ಬೇಕು ಎಂದು ಅನೇಕ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಹಾಗಾಗಿ ಇಲ್ಲಿ ಅಧಿಕಾರ ದಾಹಕ್ಕೆ, ಅಧಿಕಾರಕ್ಕೆ ಅಂಟಿಕೊಂಡು ದೇವೇಗೌಡರು ರಾಜಕಾರಣ ಮಾಡುತ್ತಿಲ್ಲ ಎಂದರು.
ದೇವೇಗೌಡರ 62 ವರ್ಷಗಳ ಅವರ ರಾಜಕೀಯ ಬದುಕಿನಲ್ಲಿ ಏನನ್ನೂ ಅಪೇಕ್ಷೆ ಇಟ್ಟುಕೊಂಡವರಲ್ಲ. ಅಷ್ಟು ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಕೇವಲ ಮೂರೂವರೆ ವರ್ಷ ಮಾತ್ರ ಅಧಿಕಾರದಲ್ಲಿ ಇದ್ದರು. ಈಗೇನು ಅವರು ಮತ್ತೆ ಪ್ರಧಾನಿ ಆಗಲಿಕ್ಕೆ ರಾಜಕೀಯ ಮಾಡುತ್ತಿದ್ದಾರೆಯೇ? ಅವರು ನಿವೃತ್ತಿ ಹೊಂದಬೇಕಾ? ಎಂದು ಅವರು ಕಿಡಿಕಾರಿದರು.
PublicNext
24/11/2024 06:05 pm