ಬೆಂಗಳೂರು: ಕಗ್ಗಲಿಪುರ-ಬನ್ನೇರುಘಟ್ಟ ರಸ್ತೆ ಬಳಿಯ ಭೂತನಹಳ್ಳಿ ಕಿರು ಅರಣ್ಯದಲ್ಲಿ ಒತ್ತುವರಿ ಮಾಡಲಾಗಿದ್ದ ಸುಮಾರು 25 ಕೋಟಿ ರೂ. ಮೌಲ್ಯದ 4.3 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಇಂದು ತೆರವು ಮಾಡಿಸಿದ್ದಾರೆ.
ಆನೇಕಲ್ ವಲಯದ ಭೂತನಹಳ್ಳಿಯಲ್ಲಿ 539 ಎಕರೆ 27 ಗುಂಟೆ ಕಿರು ಅರಣ್ಯ ಪ್ರದೇಶವಾಗಿದ್ದು, ಇದರಲ್ಲಿ ರವಿ ಕಾವಲೆ ಎಂಬುವವರು 4 ಎಕರೆ 3 ಗುಂಟೆ ಭೂಮಿ ಒತ್ತುವರಿ ಮಾಡಿ, ತೋಟದ ಮನೆ ನಿರ್ಮಿಸಿದ್ದರು. 2006ರಲ್ಲಿ ಎಫ್.ಐ.ಆರ್. ದಾಖಲಿಸಿದ್ದ ಅರಣ್ಯ ಇಲಾಖೆ ತನ್ನ ಭೂಮಿಯನ್ನು ಮರು ವಶಕ್ಕೆ ಪಡೆಯಲು ಕಳೆದ 18 ವರ್ಷಗಳಿಂದ ಕಾನೂನು ಹೋರಾಟ ನಡೆಸಿತ್ತು.
ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಅಂದರೆ 1934ರಲ್ಲಿಯೇ ಭೂತನಹಳ್ಳಿಯಲ್ಲಿ 539 ಎಕರೆ 27 ಗುಂಟೆಯನ್ನು ಕಿರು ಅರಣ್ಯ ಎಂದು ಘೋಷಿಸಲಾಗಿತ್ತು. ಸದರಿ ಅರಣ್ಯದಲ್ಲಿ ಈವರೆಗೆ ಶೇಕಡ 70ರಷ್ಟು ಒತ್ತುವರಿ ತೆರವು ಮಾಡಲಾಗಿದ್ದು, ಉಳಿದ ಭೂಮಿಯ ಮರು ವಶಕ್ಕೆ ಕಾನೂನು ಹೋರಾಟ ಮುಂದುವರಿದಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಸೂಚನೆಯ ಮೇರೆಗೆ ಅರಣ್ಯ ಅಧಿಕಾರಿಗಳು ನಿಯಮಾನುಸಾರ ಒತ್ತುವರಿ ತೆರವು ಕಾರ್ಯ ಮಾಡುತ್ತಿದ್ದಾರೆ.
PublicNext
23/11/2024 07:46 pm