ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರಿಂದ
ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ದೂರುಗಳ ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಅನೇಕ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಂದ ಆಗುತ್ತಿರುವ ಹಾಗೂ ಆಗಬಹುದಾದ ಕೆಲಸ ಮತ್ತು ಸಮಸ್ಯೆಗಳ ಬಗ್ಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಆ ಅಹವಾಲುಗಳ ಬಗ್ಗೆ ಉಪಲೋಕಾಯುಕ್ತರು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಬಗೆಹರಿಸಿಕೊಡುವಂತೆ ಸೂಚನೆ ಕೂಡ ನೀಡಿದರು.
ವಿಶೇಷವಾಗಿ ಹುಬ್ಬಳ್ಳಿಯ ದೇಶಪಾಂಡೆನಗರದ ಬ್ಯಾಹಟ್ಟಿ ಪ್ಲಾಟ್‌ನಲ್ಲಿ 1995ರಿಂದ ನೀರು ಸರಬರಾಜು ಇಲ್ಲದಿದ್ದರೂ ನೀರಿನ ಬಿಲ್ ನೀಡಲಾಗುತ್ತಿದೆ. ಬಾಕಿ ಹಣದ ಬಡ್ಡಿ ಏರುತ್ತಲೇ ಇದೆ. ಈ ಬಗ್ಗೆ ನೂರಾರು ದೂರು ನೀಡಿದರೂ ಕ್ರಮವಾಗಿಲ್ಲ ಎಂದು ಆನಂದ ಸಂಶೀಕರ ಅಹವಾಲು ಸಲ್ಲಿಸಿದರು.
ಇದರಿಂದ ಪಾಲಿಕೆ ಅಧಿಕಾರಿಗಳ ವಿರುದ್ಧ ಗರಂ ಆದ ಉಪ ಲೋಕಾಯುಕ್ತರು, ಈಗ ಆಗಿರುವ ಪ್ರಮಾದವನ್ನು ಸರಿಪಡಿಸಿಕೊಳ್ಳಬೇಕು ಎಂದರು.
ಹುಬ್ಬಳ್ಳಿಯ ಪ್ರೆಸ್ಟಿಜ್ ಗಾರ್ಡನ್ ಲೇಔಟ್‌ಗೆ 5 ವರ್ಷಗಳಿಂದ ಮೂಲ ಸೌಕರ್ಯ ಕಲ್ಪಿಸಿಲ್ಲ, ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ, ಬೀದಿ ದೀಪಗಳಿಲ್ಲ. ಪಾಲಿಕೆಗೆ ಹತ್ತಾರು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಹವಾಲು ಸಲ್ಲಿಸಿದರು.
ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಪ ಲೋಕಾಯುಕ್ತರು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೊನಿಯಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಾಣವಾಗುತ್ತಿರುವ ಕುರಿತು ನಿವಾಸಿಗಳು ದೂರಿದರು. ಕಟ್ಟಡ ನಿರ್ಮಿಸುವವರಿಗೆ ನೋಟಿಸ್ ಕೊಟ್ಟು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಪಲೋಕಾಯುಕ್ತರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಪಂ ಸಿಇಓ ಸ್ವರೂಪಾ ಟಿ.ಕೆ. ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Kshetra Samachara
21/11/2024 08:00 pm