ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇದ್ದ ಅನುದಾನ ಬೇರೆ ಕಾಮಗಾರಿಗೆ ಬಳಕೆ, ರಸ್ತೆ ಇಲ್ಲದೇ ಹೈರಾಣಾಗುತ್ತಿರುವ ರೈತರು

ಪಬ್ಲಿಕ್ ನೆಕ್ಸ್ಟ್ ವಿಶೇಷ:

ಧಾರವಾಡ: ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ಕೊಟ್ಟ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿದೆ. ಬಿಜೆಪಿ ಅವಧಿಯಲ್ಲಾದ ಅನೇಕ ಕಾಮಗಾರಿಗಳಿಗೂ ಕಾಂಗ್ರೆಸ್ ಕತ್ತರಿ ಹಾಕಿ ಆ ಹಣವನ್ನೂ ಗ್ಯಾರಂಟಿಗೆ ಬಳಕೆ ಮಾಡುತ್ತಿದೆ. ಆದರೆ, ರೈತರಿಗೆ ಅವಶ್ಯವಾಗಿ ಬೇಕಾಗಿದ್ದ ರಸ್ತೆ ನಿರ್ಮಾಣ ಕಾಮಗಾರಿಗೂ ಇದೀಗ ಕತ್ತರಿ ಹಾಕಲಾಗಿದೆ.

ಹೌದು! ಈ ರಸ್ತೆಯನ್ನೊಮ್ಮೆ ನೋಡಿ. ಈಗಲೇ ಈ ರಸ್ತೆಯ ಪರಿಸ್ಥಿತಿ ಹೀಗಿರಬೇಕಾದರೆ ಮಳೆಯಾದರೆ ಈ ರಸ್ತೆಯ ಸ್ಥಿತಿ ಇನ್ನೂ ಏನಾಗಬಾರದು. ದೊಡ್ಡ ದೊಡ್ಡ ಕೊನ್ಹಾರಗಳೇ ಈ ರಸ್ತೆಯಲ್ಲಿ ಬಿದ್ದಿವೆ. ಈ ರಸ್ತೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಿಂದ ಮುಂದೆ ಸವದತ್ತಿ ತಾಲೂಕಿನ ಸಂಗ್ರೇಸಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅಂದಾಜು ನಾಲ್ಕು ಕಿಲೋ ಮೀಟರ್‌ನಷ್ಟಿರುವ ಈ ರಸ್ತೆ ನಿರ್ಮಾಣ ಕಾಮಗಾರಿಗೆ ಹಿಂದಿನ ಶಾಸಕರಾದ ಅಮೃತ ದೇಸಾಯಿ ಅವರು ಭೂಮಿಪೂಜೆ ಮಾಡಿದ್ದರು. ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್‌ನಿಂದ 50 ಲಕ್ಷ ರೂಪಾಯಿ ಅನುದಾನ ಈ ರಸ್ತೆ ನಿರ್ಮಾಣ ಕಾಮಗಾರಿಗೆ ಬಿಡುಗಡೆಯಾಗಿತ್ತು. ಅಂದುಕೊಂಡಂತೆ ಆಗಿದ್ದರೆ ಈಗ ಇಲ್ಲಿ ಸುಸಜ್ಜಿತ ಡಾಂಬರು ರಸ್ತೆ ನಿರ್ಮಾಣವಾಗಬೇಕಿತ್ತು. ಆದರೆ, ಚುನಾವಣೆ ಘೋಷಣೆಯಾಗಿ ಅಮೃತ ದೇಸಾಯಿ ಅವರು ಪರಾಭವಗೊಂಡ ನಂತರ ಕಾಮಗಾರಿ ಆರಂಭಗೊಳ್ಳಲೇ ಇಲ್ಲ. ಈ ಸಂಬಂಧ ಅನೇಕರು ಈಗಿನ ಶಾಸಕರಾದ ವಿನಯ್ ಕುಲಕರ್ಣಿ ಅವರಿಗೆ ಈ ಸಂಬಂಧ ಮನವಿ ಮಾಡಿದರೂ ಪ್ರಯೋಜನವೇ ಆಗಿಲ್ಲವಂತೆ.

ಈ ರಸ್ತೆ ನಿರ್ಮಾಣ ಕಾಮಗಾರಿಗೆ 50 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಹನುಮನಹಾಳದಿಂದ ಈ ರಸ್ತೆಗೆ ಸಂಪರ್ಕ ಕಲ್ಪಿಸಲು ಅರ್ಧ ಎಕರೆ ಹೊಲವೊಂದನ್ನು ಶಾಸಕ ವಿನಯ್ ಕುಲಕರ್ಣಿ ಅವರೇ ಕೊಡಿಸಿದ್ದಾರೆ. ಆದರೆ, ಅವರು ಡಾಂಬರು ರಸ್ತೆ ನಿರ್ಮಾಣಕ್ಕೆ ಮಾತ್ರ ಮುಂದಾಗದೇ ಇರುವುದು ರೈತರಿಗೆ ಬೇಸರ ತರಿಸಿದೆ.

ಈ ಹಿಂದೆ ಒಟ್ಟು ನಾಲ್ಕು ಕಾಮಗಾರಿಗಳಿಗೆ ಒಟ್ಟು 2 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆ ಕಾಮಗಾರಿಗಳಿಗೆ ಭೂಮಿಪೂಜೆ ಸಹ ನೆರವೇರಿಸಲಾಗಿತ್ತು. ಆದರೆ, ವಿನಯ್ ಕುಲಕರ್ಣಿ ಶಾಸಕರಾದ ನಂತರ ಆ ಕಾಮಗಾರಿಗಳನ್ನು ಬಿಟ್ಟು ಅದೇ ಅನುದಾನವನ್ನು ಬೇರೆ ಐದು ಕಾಮಗಾರಿಗಳಿಗೆ ಬಳಕೆ ಮಾಡಲು ಸೂಚಿಸಿದ್ದಾರೆ. ಇದರಿಂದ ಉಪ್ಪಿನ ಬೆಟಗೇರಿ ಹಾಗೂ ಸಂಗ್ರೇಸಕೊಪ್ಪ ರಸ್ತೆ ನೆನೆಗುದಿಗೆ ಬಿದ್ದಿದ್ದು, ರೈತರು ನಿತ್ಯ ಹೈರಾಣಾಗಬೇಕಿದೆ. ಈ ರಸ್ತೆ ನಿರ್ಮಾಣಕ್ಕೆ ಶಾಸಕರು ಬೇರೆ ರೀತಿಯಿಂದಾದರೂ ಅನುದಾನ ತಂದು ಹಾಕಿ ರಸ್ತೆ ಮಾಡಿಕೊಡಬೇಕು ಎಂಬುದು ಇಲ್ಲಿನ ರೈತರ ಒತ್ತಾಯವಾಗಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By : Vinayak Patil
Kshetra Samachara

Kshetra Samachara

21/11/2024 07:20 pm

Cinque Terre

27.13 K

Cinque Terre

2

ಸಂಬಂಧಿತ ಸುದ್ದಿ