ಕುಂದಾಪುರ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ಉಡುಪಿ ಜಿಲ್ಲೆಯ ಜನ್ನಾಡಿ ಮತ್ತು ಮಣಿಗೇರಿ ಕೊರಗರ ಕಾಲೋನಿಯಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ 14 ಉಚಿತ ಮನೆಗಳ ಗೃಹ ಪೂಜೆ ಮತ್ತು ಲೋಕಾರ್ಪಣೆ ನವೆಂಬರ್ 17 ಭಾನುವಾರ ಬೆಳಿಗ್ಗೆ 10 ಗಂಟೆಗೆ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಜನ್ನಾಡಿ ಕೊರಗರ ಕಾಲೋನಿಯಲ್ಲಿ ನಡೆಯಲಿದೆ ಎಂದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ ಹೇಳಿದರು. ಅವರು ಕುಂದಾಪುರ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಉಡುಪಿ ಪೇಜಾವರ ಶ್ರೀ ಅಧೋಕ್ಷಜ ತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗೃಹ ಪೂಜೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರ ಸಚಿವರಾದ ಕೆ.ಹೆಚ್.ಮುನಿಯಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಕ್ಕುಪತ್ರ ಮತ್ತು ಕೀಲಿಕೈ ವಿತರಣೆ ಮಾಡಲಿದ್ದಾರೆ ಎಂದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷರಾದ ಡಾ.ಹೆಚ್.ಎಸ್. ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪರಿಶಿಷ್ಟಜಾತಿ ಮತ್ತು ಬುಡಕಟ್ಟು ಉಪಯೋಜನೆ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಊರ್ಮಿಳ ಬಿ., ಕೊರಗಾಭಿವೃದ್ಧಿ ಸಂಸ್ಥೆಗಳು, ಕರ್ನಾಟಕ ಮತ್ತು ಕೇರಳ ರಾಜ್ಯ ಇದರ ಅಧ್ಯಕ್ಷೆ ಸುಶೀಲ ನಾಡ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜ ಸೇವಕರು, ರಾಜಕೀಯ ಮುಖಂಡರಾದ ದಿನೇಶ ಹೆಗ್ಡೆ ಮೊಳಹಳ್ಳಿ, ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ದೀಪಾ ಶೆಟ್ಟಿ, ಹಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಉದ್ಯಮಿ ಎಚ್.ಶಂಕರ ಹೆಗ್ಡೆ, ಕೊರಗಾಭಿವೃದ್ಧಿ ಸಂಸ್ಥೆ ಕುಂದಾಪುರ ವಲಯದ ಅಧ್ಯಕ್ಷ ಕುಮಾರ್ ದಾಸ್ ಭಾಗವಹಿಸಲಿದ್ದಾರೆ ಎಂದ ಅವರು, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ವಿದ್ಯಾರ್ಥಿವೇತನ ಮೊದಲಾದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದರು.
ಅಮಾಸೆಬೈಲು ಗ್ರಾ.ಪಂ. ಸದಸ್ಯ ಕೃಷ್ಣ ಪೂಜಾರಿ ಮಾತನಾಡಿ ತೀರ ದುಸ್ಥಿತಿಯಲ್ಲಿ ವಾಸಿಸುತ್ತಿರುವ ಕೊರಗ ಕುಟುಂಬಗಳನ್ನು ಗಮನಿಸಿದ ಡಾ.ಎಚ್.ಎಸ್ ಶೆಟ್ಟಿಯವರು ಈ ಸ್ಥಳಗಳಿಗೆ ಭೇಟಿ ನೀಡಿ ಉಚಿತವಾಗಿ ಮನೆ ನಿರ್ಮಿಸಿ ಕೊಡುವ ಕಾರ್ಯಕ್ಕೆ ಮುಂದಾದರು. ಕಳೆದ ಮಾರ್ಚ್ 21ರಂದು ಭೂಮಿ ಪೂಜೆ ನೆರವೇರಿಸಲಾಯಿತು. ಈಗ 14 ಮನೆಗಳು ನಿರ್ಮಾಣಗೊಂಡಿದೆ. ಕೊರಗ ಕುಟುಂಬಗಳಿಗೆ ಒಟ್ಟು 100 ಮನೆಗಳ ನಿರ್ಮಾಣದ ಗುರಿಯನ್ನು ಅವರು ಹೊಂದಿದ್ದಾರೆ ಎಂದರು.
PublicNext
16/11/2024 10:25 am