ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದ್ದು, ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಕಲ್ಯಾಣ ವಿಭಾಗದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ-2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆ-2020 ರಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಗರ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.
ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ಕೈಗೊಂಡಿದ್ದು, ಸಮೀಕ್ಷಾ ಕಾರ್ಯಕ್ಕಾಗಿ 600ಕ್ಕೂ ಹೆಚ್ಚು ಗಣತಿದಾರರನ್ನು ನಿಯೋಸಿಕೊಳ್ಳಲಾಗಿದೆ. ಮೊಬೈಲ್ ತಂತ್ರಾಂಶದ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು,ಇದುವರೆಗೆ ವಲಯವಾರು ಸುಮಾರು 1800 ಬೀದಿ ಬದಿ ವ್ಯಾಪಾರಿಗಳನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ.
ಸಮೀಕ್ಷೆಯ ಅನುಸಾರ ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಅಲ್ಲದೇ ವಲಯ ಮಟ್ಟದಲ್ಲಿ ಪಟ್ಟಣ ಮಾರಾಟ ಸಮಿತಿಗಳನ್ನು ರಚಿಸಿ, ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ-2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆ-2020 ರಂತೆ ಬೀದಿ ವ್ಯಾಪಾರಿಗಳ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತದೆ.
ಕಲ್ಯಾಣ ವಿಭಾಗದಿಂದ ನಿಯೋಜಿಸಿರುವ ಗಣತಿದಾರರು ಸಮೀಕ್ಷೆ ಮಾಡುವ ಸಮಯದಲ್ಲಿ ಬೀದಿ ಬದಿ ವ್ಯಾಪಾರಿಗಳು ಸಹಕಾರ ನೀಡಬೇಕಿದ್ದು, ಸಮೀಕ್ಷೆ ಸಮಯದಲ್ಲಿ ಈ ಕೆಳಗಿನ ದಾಖಲೆಗಳನ್ನು ಗಣತಿದಾರರಿಗೆ ನೀಡಬೇಕು. ಪಾಲಿಕೆಯ ಕಲ್ಯಾಣ ವಿಭಾಗದಿಂದ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದ್ದು, ಈ ಬಗ್ಗೆ ಬೀದಿ ಬದಿ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೀದಿ ನಾಟಕಗಳನ್ನು ಹಮ್ಮಿಕೊಂಡು ಅವರಿಗೆ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.
ಬೀದಿ ಬದಿ ವ್ಯಾಪಾರಿಗಳು ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಬಗೆ ಹಾಗೂ ಅದರಿಂದ ಸಿಗುವ ಸೌಲಭ್ಯಗಳ ಕುರಿತ ಕರಪತ್ರಗಳನ್ನು ಕೂಡಾ ವಿತರಣೆ ಮಾಡಲಾಗುತ್ತಿದೆ. ಇದಲ್ಲದೆ ಇನ್ನಿತರೆ ಚಟುವಟಿಕೆಗಳ ಮೂಲಕ ಸಮೀಕ್ಷೆ ಪ್ರಚಾರ ಕಾರ್ಯವನ್ನು ಮಾಡಲಾಗುತ್ತಿದ್ದು, ಈ ಯೋಜನೆಯು ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕೆ ಅನುಕೂಲವಾಗಲಿದೆ. ಪಾಲಿಕೆಯ ಎಲ್ಲಾ ಎಂಟು ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯಾಪಾರ ವಲಯ(Vending Zones)ಗಳನ್ನು ಗುರುತಿಸುವ ಕಾರ್ಯ ಚುರುಕಾಗಿ ನಡಯುತ್ತಿದೆ.
ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಿಂದ ಸಾಕಷ್ಟು ಯೋಜನೆಗಳಿದ್ದು, ಅದನ್ನು ಬೀದಿ ಬದಿ ವ್ಯಾಪಾರಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ. ಪಿಎಂ ಸ್ವನಿಧಿ ಮಾತ್ರವಲ್ಲದೆ, ಪಾಲಿಕೆಯ ಕಲ್ಯಾಣ ವಿಭಾಗದಿಂದ ಇ-ಮಾರಾಟ ವಾಹನ ಖರೀದಿಗೆ ಸಹಾಯಧನ, ಒಚಿಟಿ ಮನೆ/ಅಮೃತ ಮಹೋತ್ಸವ ಮನೆ ಯೋಜನೆಗೆ ಸಹಾಯಧನ, ಗಂಭೀರ ಸ್ವರೂಪ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ವೈದ್ಯಕೀಯ ವೆಚ್ಚ ಮರು ಪಾವತಿ, ಕೌಶಲ್ಯ ತರಬೇತಿ ಕಾರ್ಯಕ್ರಮ, ಬೀದಿ ಬದಿ ವ್ಯಾಪಾರಿಗಳ ಮಕ್ಕಳ ಶಿಕ್ಷಣಕ್ಕೆ ಶುಲ್ಕ ಮರುಪಾವತಿ ಸೇರಿದಂತೆ ಇನ್ನಿತರೆ ಸೌಲಭ್ಯಗಳಿದ್ದು, ಅದರ ಸದುಪಯೋಗ ಪಡೆದುಕೊಳ್ಳಬಹುದು.
Kshetra Samachara
05/10/2024 06:18 pm