ಬೆಂಗಳೂರು: ಕಲರ್ಸ್ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ -11 ಕಾರ್ಯಕ್ರಮಕ್ಕೆ ಹೊಸ ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ 11ರಲ್ಲಿ ಮಹಿಳೆಯರ ಸಂವಿಧಾನಿಕ ಹಕ್ಕುಗಳಿಗೆ ಧಕ್ಕೆ ಆಗುತ್ತಿದೆ, ಮಹಿಳಾ ಸ್ಪರ್ಧೆಗಳಿಗೆ ಕಿರುಕುಳ ನೀಡುತ್ತಿದ್ದಾರೆ, ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಬಿಗ್ ಬಾಸ್ 11ರ ವಿರುದ್ಧ ದೂರು ನೀಡಲಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಖ್ಯಾತ ಚಲನಚಿತ್ರ ನಾಯಕ ನಟ ಸುದೀಪ್ ಅವರು ಬಿಗ್ ಬಾಸ್ 11 ಕಾರ್ಯಕ್ರಮಕ್ಕೆ ನಿರೂಪಣೆ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುರುಷ- ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ವಿಚಾರದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಬಿಗ್ ಬಾಸ್ ನ ಹೊಸ ಅಧ್ಯಾಯವೇ ಈಗ ಸಂಕಷ್ಟ ಎದುರು ಮಾಡಿದೆ.
ಹೌದು, ಭಾರತದ ನಾಗರಿಕರನ್ನು ಖಾಸಗಿ ವ್ಯಕ್ತಿಗಳು ಬಂಧನದಲ್ಲಿರಿಸುವ ಹಕ್ಕನ್ನು ಹೊಂದಿರುವುದಿಲ್ಲ. ಪ್ರಸ್ತುತ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಪುರುಷ ಮತ್ತು ಮಹಿಳೆಯರನ್ನು ಒಂದು ಜೈಲಿನ ರೂಪದಲ್ಲಿರುವ ಕೊಠಡಿಯಲ್ಲಿ ನೂರಾರು ಕ್ಯಾಮೆರಾ ಗಳಲ್ಲಿ ರೆಕಾರ್ಡ್ ಆಗುವಂತೆ ಅಕ್ರಮ ಬಂಧನದಲ್ಲಿ ಇರಿಸಲಾಗಿದೆ. ಇವರಿಗೆ ಕೇವಲ ಗಂಜಿಯನ್ನು ಆಹಾರವಾಗಿ ನೀಡುತ್ತಿರುವುದು ಸಂವಿಧಾನದ ಪ್ರಕಾರ ನಾಗರಿಕರಿಗೆ ಪೌಷ್ಟಿಕ ಆಹಾರವನ್ನು ಕೊಡದೆ ಇರುವುದು ಅಪರಾಧವಾಗಿದೆ.
ಅದರಲ್ಲೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಲಗುವ ವ್ಯವಸ್ಥೆ ನೀಡದೆ ಅವರನ್ನು ದೈಹಿಕ ಬಾಧೆ ತೀರಿಸಿಕೊಳ್ಳಲು ಮತ್ತೊಬ್ಬರ ಅನುಮತಿ ಮೇರೆಗೆ ಶೌಚಾಲಯ ಉಪಯೋಗಿಸಲು ಬಲವಂತಕ್ಕೆ ಒಳಪಡಿಸುವುದು ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಸ್ಪರ್ಧಿಗಳೊಂದಿಗೆ ಕಾನೂನುಬದ್ಧವಾಗಿ ಒಪ್ಪಂದ ಮಾಡಿಕೊಂಡಿದ್ದರೂ ಕೂಡ ಇಂತಹ ನಿರ್ಬಂಧಗಳು ಇರುವುದು ಸಂವಿಧಾನ ಬಾಹಿರ ಎಂದು ಬಿಗ್ ಬಾಸ್ 11ರ ಕಾರ್ಯಕ್ರಮ ನಿರ್ವಹಿಸುತ್ತಿರುವ ಕಲರ್ಸ್ ಕನ್ನಡ ಮುಖ್ಯಸ್ಥರ ವಿರುದ್ಧ ವಕೀಲರಾದ ರಕ್ಷಿತಾ ಪಿ. ಸಿಂಗ್ ದೂರು ನೀಡಿದ್ದಾರೆ.
PublicNext
05/10/2024 03:12 pm