ಕಾರವಾರ (ಉತ್ತರಕನ್ನಡ): ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವರಿಗೆ ಪ್ರಶಸ್ತಿ ಪತ್ರವೂ ಸೇರಿದಂತೆ ಪ್ರಯಾಣ ವೆಚ್ಚ ನೀಡದಿರುವುದಕ್ಕೆ ಕ್ರೀಡಾಪಟುಗಳು ಸಂಘಟಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ನಗರದ ಮಾಲಾದೇವಿ ಮೈದಾನದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ, ಕಬಡ್ಡಿ ಪಂದ್ಯ ಮುಗಿದ ಬಳಿಕ ವಿಜೇತರಾದವರಿಗೆ ನೀಡಬೇಕಿದ್ದ ಬಹುಮಾನ ನೀಡಿಲ್ಲ. ಕನಿಷ್ಟ ಪ್ರಮಾಣ ಪತ್ರವನ್ನು ನೀಡಿಲ್ಲ. ಪ್ರಯಾಣ ಭತ್ಯೆ ನೀಡಬೇಕೆಂಬ ನಿಯಮಗಳಿದ್ದರೂ ಅದನ್ನು ಕೂಡ ನೀಡುತ್ತಿಲ್ಲ ಎಂದು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಯಾಣ ಭತ್ಯೆ ನೀಡುವರೆಗೂ ತೆರಳುವುದಿಲ್ಲ ಎಂದು ಕ್ರೀಡಾಪಟುಗಳು ಪಟ್ಟು ಹಿಡಿದಾಗ, ಸ್ಥಳದಲ್ಲಿದ್ದ ಕೆಲ ಶಿಕ್ಷಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ವಾರ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಭರವಸೆ ನೀಡಿದ ಬಳಿಕ ಕ್ರೀಡಾಪಟುಗಳು ತೆರಳಿದ್ದಾರೆ.
PublicNext
18/09/2022 03:24 pm