ಕಾರವಾರ : ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಅನುಷ್ಠಾನವಾಗಲೇಬೇಕು. ಸೀಬರ್ಡ್, ಕೈಗಾ, ಕಾಳಿ ಯೋಜನೆಗಳಿಗೆ ಸಹಕಾರ ನೀಡಿ. ಉತ್ತರ ಕನ್ನಡದ ಜನತೆ ತಮ್ಮ ವಾಸಸ್ಥಳಗಳೊಂದಿಗೆ, ಅರಣ್ಯಭೂಮಿಗಳನ್ನ ಕಳೆದುಕೊಂಡಿದ್ದೇವೆ. ಇದೀಗ ಉತ್ತರಕರ್ನಾಟಕ- ಉತ್ತರಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ರೈಲ್ವೆ ಯೋಜನೆಗೆ ಎಲ್ಲರೂ ಪಕ್ಷಾತೀತವಾಗಿ ಒಂದಾಗಬೇಕಿದೆ ಎಂದು ಮಾಜಿ ಸಚಿವ, ಹಾಲಿ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಹೇಳಿದರು.
ಶಿರಸಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಮಾತ್ರವಲ್ಲ, ಪೂರ್ಣ ಉತ್ತರಕರ್ನಾಟಕಕ್ಕೆ ಲಾಭವಾಗಲಿದೆ. ಉತ್ತರಕರ್ನಾಟಕ ಕೂಡ ಬಹಳ ಹಿಂದುಳಿದಿದ್ದು, ರೈಲ್ವೆ ಯೋಜನೆ ಅನುಷ್ಠಾನಗೊಂಡರೆ ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮ ಬೆಳೆಯಲು ಸಾಕಷ್ಟು ಅವಕಾಶವಿದೆ ಎಂದರು.
ಹಾಗಾಗಿ ಪರಿಸರ ಸಂರಕ್ಷಣೆಯೂ ಆಗಬೇಕು, ಆಗಬಾರದು ಎನ್ನುವ ಜನತೆ ನಾವಲ್ಲ. ಉತ್ತರ ಕನ್ನಡ ಜಿಲ್ಲೆಯ ಜನ ಪರಿಸರ ಉಳಿಸಿದ್ದಾರೆ. ಹುಬ್ಬಳ್ಳಿಯಿಂದ ಕಲಘಟಕಿಯವರೆಗಿನ ಈ ರೈಲ್ವೆ ಯೋಜನೆಯ ಪ್ರಾಥಮಿಕ ಹಂತ ಮುಗಿದಿದೆ. ರೈಲ್ವೆ ಆಗದಿದ್ದರೆ ಹೆಚ್ಚು ವಾಹನಗಳು ಓಡಾಡುವ ಹುಬ್ಬಳ್ಳಿ- ಅಂಕೋಲಾ- ಕಾರವಾರ ಹೆದ್ದಾರಿ ವಿಸ್ತರಣೆ ಮಾಡಬೇಕಾಗುತ್ತದೆ. ಈ ವೇಳೆ ಪರಿಸರಕ್ಕೆ ಇನ್ನೂ ಹೆಚ್ಚು ಹಾನಿಯಾಗಲಿದೆ. ರೈಲ್ವೆ ಯೋಜನೆ ವಿಳಂಬವಾಗಿ ಈಗಾಗಲೇ ಬಹಳ ಹಾನಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರೈಲ್ವೆ ಯೋಜನೆ ಅನುಷ್ಠಾನಕ್ಕೆ ಎಲ್ಲರ ಸಹಕಾರ ಬೇಕು. ಈಗಾಗಲೇ ಹೈಕೋರ್ಟ್ ಕಮಿಟಿಯೊಂದನ್ನು ನೇಮಿಸಿದ್ದು, ಯೋಜನೆಯಿಂದ ಎಷ್ಟು ದುಷ್ಪರಿಣಾಮ ಆಗಲಿದೆ ಹಾಗೂ ಇತರ ಸಾಧ್ಯತೆಗಳ ಬಗ್ಗೆ ವರದಿ ನೀಡಲು ಸೂಚಿಸಿದೆ. ಅದರಂತೆ ನಿನ್ನೆಯಿಂದ ಈ ಕಮಿಟಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದೆ. ರೈಲ್ವೆ ಮತ್ತು ಪರಿಸರ ಸಚಿವರಿಗೆ ಈಗಾಗಲೇ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಪತ್ರ ಬರೆದು ಒತ್ತಾಯಿಸಿದ್ದೇನೆ ಎಂದು ದೇಶಪಾಂಡೆ ತಿಳಿಸಿದರು.
PublicNext
27/09/2022 04:26 pm