ಕಾರವಾರ (ಉತ್ತರಕನ್ನಡ): ಅಂತರರಾಷ್ಟ್ರೀಯ ಕಡಲತೀರ ಸ್ವಚ್ಚತಾ ದಿನದ ಅಂಗವಾಗಿ ಕಾರವಾರದ ಮಯೂರವರ್ಮ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಗಿಡಕ್ಕೆ ನೀರೆರೆಯುವ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಚ್ಛತಾ ಪ್ರತಿಜ್ಞೆ ಕೈಗೊಳ್ಳಲಾಯಿತು. ಸ್ವಚ್ಚತಾ ಕಾರ್ಯದಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹಿಸಿದ ತಂಡಕ್ಕೆ ಬಹುಮಾನ ವಿತರಣೆ, ಕಳೆದ ಏಳು ವರ್ಷಗಳಿಂದ ಕಾರವಾರದಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಮೂಲಕ ಮನೆಮಾತಾಗಿರುವ ಪಹರೆ ವೇದಿಕೆಗೆ ಪ್ರಶಂಸನಾ ಪತ್ರವನ್ನ ರಾಜ್ಯಪಾಲರು ವಿತರಿಸಿದರು.
ಇನ್ನು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲಿಗೆ ಎಲ್ಲರಿಗೂ ಕನ್ನಡದಲ್ಲೇ ಸ್ವಾಗತ ಕೋರಿದರು. ಬಳಿಕ, ಇಲ್ಲಿನ ಬಹುತೇಕರ ಆದಾಯ ಮೀನುಗಾರಿಕೆಯಿಂದ ಬರುತ್ತಿದೆ. ಹೀಗಾಗಿ ಜಲಚರಗಳಿಗೆ ತೊಂದರೆಯಾಗದಂತೆ, ಪರಿಸರ ಮತ್ತು ವ್ಯವಹಾರಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ. ಮನೆ, ಚರಂಡಿ, ನದಿಗಳನ್ನ ಸ್ವಚ್ಛವಾಗಿಟ್ಟರೆ ಸಮುದ್ರ ಸ್ವಚ್ಛವಾಗಲಿದೆ ಎಂದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್, ಜಿಲ್ಲಾ ಪಂಚಾಯತಿ ಸಿಇಒ ಪ್ರಿಯಾಂಗಾ ಎಂ. ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.
PublicNext
17/09/2022 08:07 pm