ಕಾರವಾರ (ಉತ್ತರ ಕನ್ನಡ): ಎನ್‌ಸಿಸಿಯ ಕೆಡೆಟ್‌ಗಳಿಗೆ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಹಾಯಿ ದೋಣಿಗಳಲ್ಲಿ ಸಮುದ್ರಯಾನ ತರಬೇತಿ ನೀಡಲಾಗುತ್ತಿದ್ದು, ಸೆ.23ರಿಂದ ಆರಂಭಗೊಂಡಿರುವ ಈ ತರಬೇತಿ ಅ.2ರ ತನಕ ನಡೆಯಲಿದೆ. ತರಬೇತಿಯಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯಗಳ ವ್ಯಾಪ್ತಿಯ ಎನ್‌ಸಿಸಿ ಕೆಡೆಟ್‌ಗಳು ಅತಿ ಉತ್ಸಾಹದಿಂದಲೇ ಪಾಲ್ಗೊಂಡಿದ್ದು, ಸಮುದ್ರದಲ್ಲಿ ಹಾಯಿ ದೋಣಿಗಳ ಓಟ ನೋಡುಗರ ಗಮನ ಸೆಳೆಯುತ್ತಿದೆ.
ಪ್ರತಿ ವರ್ಷ ಗೋವಾದಲ್ಲಿ ನಡೆಯುತ್ತಿದ್ದ ಈ ತರಬೇತಿ ಶಿಬಿರವನ್ನ ಇದೇ ಮೊದಲ ಬಾರಿಗೆ ಕಾರವಾರದಲ್ಲಿ ಆಯೋಜನೆ ಮಾಡಲಾಗಿದೆ. 10 ದಿನ ನಡೆಯಲಿರುವ ಈ ಶಿಬಿರದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು 60 ಎನ್‌ಸಿಸಿ ಕೆಡೆಟ್‌ಗಳು ಪಾಲ್ಗೊಂಡಿದ್ದಾರೆ. ಕಾರವಾರದ 8ನೇ ಕರ್ನಾಟಕ ನೇವಲ್ ಎನ್‌ಸಿಸಿ ಬಟಾಲಿಯನ್ ಆಯೋಜಿಸಿರುವ ಈ ಶಿಬಿರವು ಕರ್ನಾಟಕ ಬಟಾಲಿಯನ್ ಕಮಾಂಡಿಂಗ್ ಆಫೀಸರ್ ಸತ್ಯನಾಥ ಭೋಸ್ಲೆ, ಕಮಾಂಡರ್ ಭರತ್‌ಕುಮಾರ್, ಕಮಾಂಡರ್ ರಿಜಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ.
ತಲಾ 27 ಅಡಿಗಳಷ್ಟು ಉದ್ದದ ಮೋಟರ್ ಅಳವಡಿಸಿದ ಮೂರು ಹಾಯಿ ದೋಣಿಗಳಲ್ಲಿ, ಕಾಳಿ ನದಿ ಮತ್ತು ಅರಬ್ಬಿ ಸಮುದ್ರದಲ್ಲಿ ಪ್ರತಿದಿನ 20- 25 ಕಿ.ಮೀ. ದೂರದ ಯಾನದಲ್ಲಿ ಕೆಡೆಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ. ಶಿಬಿರದ 10 ದಿನದಲ್ಲಿ ಸುಮಾರು 200ಕ್ಕೂ ಹೆಚ್ಚು ಕಿಲೋ ಮೀಟರ್‌ಗಳನ್ನ ಕೆಡೆಟ್‌ಗಳು ಪೂರೈಸಬೇಕಿದೆ.
PublicNext
26/09/2022 07:05 pm