ಕಾರವಾರ: ನಿನ್ನೆ ಮುಳುಗುತ್ತಿದ್ದ ಬೋಟ್ ನಿಂದ ಸಮುದ್ರಕ್ಕೆ ಎಸೆಯಲಾಗಿದ್ದ ಮೀನುಗಳು ಇಂದು ಅಲಿಗದ್ದಾದಿಂದ ಕೋಡಿಬಾಗ ಸಂಗಮ ಪ್ರದೇಶದವರೆಗಿನ ಕಡಲತೀರದಲ್ಲಿ ಬಂದುಬಿದ್ದಿದೆ.
ನಿನ್ನೆ ಅರಬ್ಬೀ ಸಮುದ್ರದಲ್ಲಿ ಶಿಕಾರಿ ಮಾಡಿ 30 ಟನ್ ಮೀನುಗಳನ್ನ ತುಂಬಿಕೊಂಡು ಬರುತ್ತಿದ್ದ ಬೋಟ್ ಮುಳುಗಡೆಯಾಗಿತ್ತು. ಅದನ್ನ ಬಂದರಿಗೆ ಎಳೆದು ತರಲೆಂದು ಮೀನುಗಾರರು ಬೋಟ್ ನಲ್ಲಿದ್ದ ಮೀನುಗಳನ್ನು ಸಮುದ್ರಕ್ಕೆ ಎಸೆದಿದ್ದರು. ಆದರೆ ಇಂದು ಆ ಮೀನುಗಳೆಲ್ಲ ಸತ್ತು, ದಡಕ್ಕೆ ತೇಲಿಬಂದಿವೆ. ಸುಮಾರು ನಾಲ್ಕು ಕಿಲೋ ಮೀಟರ್ ಉದ್ದದ ಕಾರವಾರದ ಟ್ಯಾಗೋರ್ ಕಡಲತೀರಕ್ಕೆ ಪ್ರತಿದಿನ ವಾಯುವಿವಾರಕ್ಕೆ ನೂರಾರು ಜನ ಬರುತ್ತಾರೆ. ಆದರೆ ಇಂದು ಬಂದವರು ದಡದಲ್ಲಿ ಸತ್ತ ಮೀನುಗಳ ರಾಶಿ ಕಂಡು, ಅದರ ದುರ್ವಾಸನೆ ತಡೆಯಲಾರದೆ ಮೂಗುಮುಚ್ಚಿಕೊಂಡೇ ತಿರುಗುವಂತಾಯಿತು. ಕಾಗೆ, ಹದ್ದುಗಳು ದಡದಲ್ಲಿ ಸತ್ತು ಬಿದ್ದಿದ್ದ ಮೀನುಗಳಿಗಾಗಿ ಗುಂಪು ಕಟ್ಟಿಕೊಂಡು ಮುತ್ತಿಗೆ ಹಾಕಿದ್ದು, ತೀರದಲ್ಲಿ ನಡೆದಾಡಲು ಪ್ರವಾಸಿಗರು ಅಸಹ್ಯ ಪಡುವಂತಾಗಿದೆ.
PublicNext
20/09/2022 07:24 pm