ಕಾರ್ಕಳ : ಕೇಂದ್ರದ ಅರಣ್ಯ ಮತ್ತು ಪರಿಸರ ಮಂತ್ರಿಯಾಗಿ 2013ರಲ್ಲಿ ಉಡುಪಿ ಹೆಬ್ರಿ ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ಮಂಜೂರು ಮಾಡಿಸಿ 350 ಕೋಟಿ ರೂ. ಅನುದಾನವನ್ನು ಕೂಡ ಬಿಡುಗಡೆಗೊಳಿಸಿದ್ದೇವೆ. ಆದರೆ ಈಗಿನ ಬಿಜೆಪಿ ಸರ್ಕಾರ ಹೆದ್ದಾರಿಯ ಕೆಲಸವನ್ನು ಶೀಘ್ರವಾಗಿ ಮಾಡಲು ಮೀನ ಮೇಷ ಎಣಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರಾದ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಬೇಸರ ವ್ಯಕ್ತಪಡಿಸಿದರು.
ಅವರು ಗುರುವಾರ ಹೆಬ್ರಿ ಬ್ಲಾಕ್ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ಭಾರತ್ ಐಕ್ಯತಾ ಯಾತ್ರೆಯನ್ನು ಚಾಲನೆ ನೀಡಿ ಮಾತನಾಡಿದರು.
ಧರ್ಮ ಧರ್ಮಗಳ ನಡುವೆ ಬಿರುಕು ಮೂಡಿಸಿ ಬಿಜೆಪಿಯು ಜಾತಿ ಜಾತಿಯನ್ನು ಒಡೆದು ಆಳುತ್ತಿದೆ. ಹಿಂದೂ ಸ್ಥಾನದಲ್ಲಿರುವ ನಾವೆಲ್ಲರೂ ಒಂದೇ .ನಮ್ಮಲ್ಲಿ ಭೇದಭಾವ ಸಲ್ಲದು. ಭಾರತದಲ್ಲಿ ನಾವೆಲ್ಲ ಜೊತೆಯಾಗಿ ಬಾಳಬೇಕು. ಭಾರತ ಒಂದಾಗಬೇಕು, ಅದಕ್ಕಾಗಿ ರಾಹುಲ್‌ಗಾಂಧಿ ನೇತ್ರತ್ವದಲ್ಲಿ ಭಾರತ್ ಐಕ್ಯತಾ ಯಾತ್ರೆ ಆರಂಭಗೊಳಿಸಲಾಗಿದೆ. ಯಾತ್ರೆಯು ಕಾಶ್ಮೀರ ತಲುಪುವಾಗ ಜನರನ್ನು ಭಾವನೆಗಳ ಮೂಲಕ ಆಳುವ ನರೇಂದ್ರ ಮೋದಿ ನೇತ್ರತ್ವದ ಬಿಜೆಪಿ ಸರ್ಕಾರ ಅಂತ್ಯವಾಗಿ ಕಾಂಗ್ರೆಸ್‌ಯುಗ ಆರಂಭಗೊಳ್ಳಲಿದೆ ಎಂದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದ ಬಲವರ್ಧನೆಗೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕುಶಲ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಹೆಬ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ಪಕ್ಷದ ವಿವಿಧ ಪ್ರಮುಖರಾದ ಸುರೇಂದ್ರ ಶೆಟ್ಟಿ ಕಾರ್ಕಳ, ಶೀನ ಪೂಜಾರಿ, ದಿನೇಶ ಶೆಟ್ಟಿ ಹೆಬ್ರಿ, ಸಿರಿಯಣ್ಣ ಶೆಟ್ಟಿ, ಸದಾಶಿವ ದೇವಾಡಿಗ, ಸುಧಾಕರ ಕೋಟ್ಯಾನ್, ಬಿಪಿನ್‌ಚಂದ್ರಪಾಲ್, ರಾಘವ ದೇವಾಡಿಗ, ಎಚ್. ಜನಾರ್ಧನ್‌ಹೆಬ್ರಿ, ವಿವಿಧ ಘಟಕಗಳ ಪ್ರಮುಖರು ಭಾಗವಹಿಸಿದ್ದರು.
Kshetra Samachara
09/09/2022 08:11 pm