ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ : ಸುನಿಲ್ ಆಕ್ರೋಶ

ಉಡುಪಿ: ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣರಾಜ್ಯೋತ್ಸವ ಪರೇಡ್ ಗೆ ಟಿಪ್ಪು ಸುಲ್ತಾನ್ ಸ್ಥಬ್ದಚಿತ್ರ ಕಳುಹಿಸುವಂತೆ ಶಿಫಾರಸ್ಸು ಮಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಈಗ ಮಹರ್ಷಿ ನಾರಾಯಣಗುರುಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ ಎಂದು ಕನ್ನಡ - ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಬಿಡುವಿನ ವೇಳೆಯನ್ನು ಸತ್ಕಾರ್ಯಕ್ಕೆ ಬಳಸಿಕೊಳ್ಳುವ ಬದಲು ಎಲ್ಲದರಲ್ಲೂ ರಾಜಕೀಯವನ್ನು ಹುಡುಕುವ ಸಿದ್ದರಾಮಯ್ಯನವರು ಕೇರಳದ ಕಮ್ಯುನಿಷ್ಟ್ ಸರಕಾರ ಹಚ್ಚಿದ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳಲು ಹೊರಟಿದ್ದಾರೆ. ನಾರಾಯಣ ಗುರು ರಾಜಕೀಯ ವಸ್ತುವಲ್ಲ, ಅವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಹೋಗಬೇಡಿ. ಟಿಪ್ಪು ಆದರ್ಶ ಪ್ರತಿಪಾದಕರು ನಾರಾಯಣ ಗುರುಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಹಿಂದೆ ಕೇರಳ ಸರಕಾರ ನಾರಾಯಣ ಗುರು ಪ್ರತಿಮೆಯನ್ನು ಸಿಲುಬೆಗೆ ಕಟ್ಟಿ ಅವಮಾನ ಮಾಡಿದಾಗ ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡುವ ಧೈರ್ಯ ಇರಲಿಲ್ಲ. ಗಣರಾಜ್ಯೋತ್ಸವದ ಪರೇಡ್ ಗೆ ಟಿಪ್ಪು ಸುಲ್ತಾನ್ ಸ್ಥಬ್ದಚಿತ್ರ ಕಳುಹಿಸುವಂತೆ ಶಿಫಾರಸ್ಸು ಮಾಡಿದ್ದ ನೀವು ಹಿಂದು ಧಾರ್ಮಿಕ ಸಂತರ ಪರ ಈಗ ವಕಾಲತು ವಹಿಸುವುದು ಚೋದ್ಯ. "ಒಂದೇ ಕಣ್ಣಿನಲ್ಲಿ ನೀರು ಸುರಿಸಿ ಅಮಾಯಕರನ್ನು ಬಲಿ ಪಡೆಯುವ ನಿಮ್ಮ ಮಕರ ನೀತಿ" ಯನ್ನು ರಾಜ್ಯದ ಜನತೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಕೇರಳದ ಸ್ಥಬ್ದಚಿತ್ರವನ್ನು ಪರೇಡ್ ಗೆ ಪರಿಗಣಿಸಿಲ್ಲ ಎಂದು ವಿವಾದ ಸೃಷ್ಟಿಸುತ್ತಿರುವ ನಿಮಗೆ ರಾಜ್ಯದ ಸ್ಥಬ್ದಚಿತ್ರ ಆಯ್ಕೆಯಾಗಿರುವ ಬಗ್ಗೆ ಪರಿವೆ ಇಲ್ಲವೇ ? ಈ ಸಂಬಂಧ ಕೇಂದ್ರ ಸರಕಾರವನ್ನು ಅಭಿನಂದಿಸುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗೆ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದೀರಿ. ನಾರಾಯಣ ಗುರುಗಳ ಸಮಾಜ ಸುಧಾರಣಾ ಕಾರ್ಯದ ಬಗ್ಗೆ ಪ್ರಧಾನಿ ಮೋದಿ ಅಪಾರ ಕಾಳಜಿ ಹೊಂದಿದ್ದು, ತಮ್ಮ ಭಾಷಣದಲ್ಲಿ ಅನೇಕ ಬಾರಿ ಪ್ರಸ್ತಾಪಿಸಿದ್ದಾರೆ. ನಾರಾಯಣಗುರುಗಳ ಆಶ್ರಮಕ್ಕೆ ಎರಡು ಬಾರಿ ಭೇಟಿ ನೀಡಿದ್ದಷ್ಟೇ ಅಲ್ಲ, ಈ ಆಶ್ರಮದ ಗುರುಗಳಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಿಮ್ಮ ಹಾಗೆ ತೋರಿಕೆಯ ಭಕ್ತಿ ಪ್ರದರ್ಶನ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

20/01/2022 05:19 pm

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ