ಉಡುಪಿ: ದೇಶದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ರೈತಪರ ಕೇಂದ್ರ ಕೃಷಿ ಕಾಯ್ದೆಯನ್ನು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಯ ಹಿತಾಸಕ್ತಿಯಿಂದ ಹಿಂಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಜಾಣ ನಡೆ ಪ್ರಶಂಸನೀಯ ಎಂದು ಜಿಲ್ಲಾ ಬಿಜೆಪಿ ಹೇಳಿದೆ.
ಕಾಂಗ್ರೆಸ್ ಬೆಂಬಲದಿಂದ ರಾಕೇಶ್ ಟಿಕಾಯತ್ ನಂತಹ ನಕಲಿ ರೈತ ನಾಯಕರು ಐಶಾರಾಮಿ ವ್ಯವಸ್ಥೆಗಳೊಂದಿಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನೈಜ ರೈತರ ಹಿತವನ್ನು ಕಡೆಗಣಿಸಿ ಮಧ್ಯವರ್ತಿಗಳ ಹಿತಾಸಕ್ತಿಗಾಗಿ ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ವರ್ಷಕ್ಕೂ ಮಿಕ್ಕಿ ಅವಧಿಯಲ್ಲಿ ನಡೆಸಿದ ಆಂದೋಲನ ಯಾವ ರೀತಿಯಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂಬುದು ದೇಶದ ಜನತೆಯ ಮುಂದೆ ಜಗಜ್ಜಾಹೀರಾಗಿದೆ. ಕೊನೆಗೂ ಆಂದೋಲನ ಜೀವಿಗಳ ಮುಖ್ಯಸ್ಥ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ನೈಜ ರೈತರ ಮುಖವಾಡ ಧರಿಸಿರುವ ನಕಲಿ ರೈತರು ನಡೆಸಿರುವ ಕೇಂದ್ರ ಕೃಷಿ ಕಾಯ್ದೆ ವಿರೋಧಿ ಆಂದೋಲನ ಹಳ್ಳ ಹಿಡಿದು ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗಿದೆ.
ನೋಟ್ ಬ್ಯಾನ್, 370ನೇ ವಿಧಿ ರದ್ಧತಿ, ತ್ರಿವಳಿ ತಲಾಖ್ ರದ್ಧತಿಯ ಜೊತೆಗೆ ಸಿಎಎ ಕಾಯ್ದೆ ಜಾರಿಗೆ ಬದ್ಧವಿರುವ, ಶತ್ರು ರಾಷ್ಟ್ರ ಚೀನಾ ಮತ್ತು ಪಾಕಿಸ್ಥಾನದ ಹೆಡೆಮುರಿ ಕಟ್ಟಲು ಎಲ್ಲ ಅಗತ್ಯ ವ್ಯವಸ್ಥೆಗಳೊಂದಿಗೆ ಸನ್ನದ್ಧವಾಗಿರುವ, ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ ಶ್ರೀರಾಮ ಮಂದಿರ ನಿರ್ಮಾಣದ ಸಹಿತ ಮುಸ್ಲಿಂ ರಾಷ್ಟ್ರದಲ್ಲೂ ಮಂದಿರ ನಿರ್ಮಾಣಕ್ಕೆ ಕಾರಣರಾದ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ದೂರದರ್ಶಿತ್ವದ ಚಿಂತನೆಯ ನಿರ್ಧಾರದಲ್ಲಿ ದೇಶದ ಹಿತವಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನೈಜ ರೈತರ ಹಿತ ಕಾಯುವ ಪರಿಷ್ಕ್ರತ ಕೃಷಿ ಕಾಯ್ದೆ ಜಾರಿಗೆ ಬರುವ ಸಂಪೂರ್ಣ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ತಿಳಿಸಿದ್ದಾರೆ.
Kshetra Samachara
25/11/2021 05:17 pm