ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಪಂಗಳಿಗೆ ಪರಮಾಧಿಕಾರ ಸಿಗಬೇಕು: ಹೊಸದಿಲ್ಲಿ ಪಂಚಾಯತ್ ರಾಜ್ ಸಂವಾದದಲ್ಲಿ ದೇವಿಪ್ರಸಾದ್ ಶೆಟ್ಟಿ

ವರದಿ: ಶಫೀ ಉಚ್ಚಿಲ

ಕಾಪು : ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕರ್ನಾಟಕ ದಿಂದ ಆಯ್ಕೆಯಾದ ಗ್ರಾಮೀಣಾಭಿವೃದ್ಧಿ ಪ್ರತಿನಿಧಿ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಹೊಸದಿಲ್ಲಿ ಮಂತ್ರಾಲಯದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಪಂಚಾಯತ್ ಸಾಧನೆ, ಜನರ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಂಡಿರುವ ಯೋಜನೆ ಹಾಗೂ ಸರಕಾರದ ಕಾರ್ಯಕ್ರಮ ಬಗ್ಗೆ ಅಭಿಪ್ರಾಯ ಮಂಡಿಸಿದರು.

ಗ್ರಾಪಂ ಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿದ್ದಲ್ಲಿ ವಿವಿಧ ಮೂಲಗಳ ಸಂಪನ್ಮೂಲ ಕ್ರೋಡೀಕರಿಸಿ ನಗರಕ್ಕೆ ಹೋಲುವ ಮಾದರಿಯಲ್ಲಿ ಅಭಿವೃದ್ಧಿ ಯೋಜನೆ ಅನುಷ್ಠಾನಿಸಲು ಸಾಧ್ಯವೆಂಬುದನ್ನು ಬೆಳಪು ಗ್ರಾಪಂನ ಅಭಿವೃದ್ಧಿ ಉಲ್ಲೇಖಿಸಿ ದೇಶದ ಎಲ್ಲಾ ಗ್ರಾಮಗಳಿಗೂ ಇದು ಅನುಕರಣೀಯವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಶ್ಲಾಘಿಸಿದರು.

ಬೆಳಪುವಿನಲ್ಲಿ ಬಹುತೇಕ ಕಾರ್ಯ ಯೋಜನೆ ಯಶಸ್ವಿಯಾಗಿದೆ. ಮಿನಿ ವಿಧಾನ ಸೌಧ ಹೋಲುವ ಪಂ. ಕಚೇರಿ, ಶೈಕ್ಷಣಿಕ ಯೋಜನೆ, ಕೈಗಾರಿಕೆ ಪಾರ್ಕ್, ಪ್ರವಾಸೋದ್ಯಮಕ್ಕೆ ಉತ್ತೇಜನ, ಪರಿಸರ ಸಂರಕ್ಷಣೆ, ಸ್ವಚ್ಛ ಭಾರತ ಅಭಿಯಾನ, ಸಮುದಾಯ ಅಭಿವೃದ್ಧಿ, ಸ್ವಸಹಾಯ ಗುಂಪು ಚಟುವಟಿಕೆ, ಆರೋಗ್ಯ ಯೋಜನೆ, ಬೃಹತ್ ಕುಡಿಯುವ ನೀರು ಯೋಜನೆ, ಶುದ್ಧೀಕರಣ ಘಟಕ, ಘನ ತ್ಯಾಜ್ಯ ವಿಲೇವಾರಿ ಘಟಕ, ಸಾಮಾಜಿಕ ಅರಣ್ಯ, ಗ್ರಾಮೀಣ ವಸತಿ, ಸುಸಜ್ಜಿತ ಗ್ರಂಥಾಲಯ, ಸ್ಥಳೀಯ ಆರ್ಥಿಕ ಸಂಪನ್ಮೂಲಭಿವೃದ್ಧಿ, ಪ.ಜಾತಿ-ಪ.ಪಂಗಡ ಹಾಗೂ ವಿಕಲಚೇತನರ ಅಭಿವೃದ್ಧಿ, ಹೈನುಗಾರಿಕೆ, ನೀರಾವರಿ ಸೌಲಭ್ಯ, ಕೃಷಿಗೆ ಉತ್ತೇಜನ, ಮಕ್ಕಳ ಗ್ರಾಮಸಭೆ, ಕೋಮು ಸಾಮರಸ್ಯಕ್ಕೆ ಉತ್ತೇಜನ, ನಿರುದ್ಯೋಗ ನಿವಾರಣೆ ಕ್ರಮ, ಪಠ್ಯಪುಸ್ತಕದಲ್ಲಿ ಬೆಳಪು, ಮೂಲ ಸೌಕರ್ಯಕ್ಕೆ ಒತ್ತು ನೀಡಿರುವ ಬಗ್ಗೆಉಲ್ಲೇಖಿಸಿದ ಅವರು, ಬೆಳಪುವಿಗೆ ಕೇಂದ್ರ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳನ್ನು ವಿಶೇಷ ಅಧ್ಯಯನಕ್ಕೆ ಕಳುಹಿಸುವುದಾಗಿ ತಿಳಿಸಿದ್ದು, ನವದೆಹಲಿಯಲ್ಲಿ ನ.8ರಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ 2ನೇ ಸುತ್ತಿನ ಚರ್ಚೆಯಲ್ಲಿ ಭಾಗವಹಿಸುವಂತೆಯೂ ಆಹ್ವಾನಿಸಿದರು.

ರಾಜ್ಯ ಪ್ರತಿನಿಧಿ ದೇವಿಪ್ರಸಾದ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿ, ಪಂಚಾಯತ್ ಗಳಿಗೆ ಪರಮಾಧಿಕಾರ ನೀಡುವುದು. ಗ್ರಾಮಸಭೆಗಳ ಅಧಿಕಾರ ಮೊಟಕುಗೊಳಿಸದಿರುವುದು.

ಕೇರಳ ಮಾದರಿಯಲ್ಲಿ ಗ್ರಾ ಪಂಗೆ ಹೆಚ್ಚಿನ ಅಧಿಕಾರ, ಅನುದಾನ ನೀಡುವುದು. ಪಂಚಾಯತ್ ಗಳಿಗೆ ಅನುಷ್ಠಾನಗೊಳ್ಳುವ ಎಲ್ಲಾ ಇಲಾಖೆ ಕಾಮಗಾರಿಗೂ ನೇರ ಅನುದಾನ ಒದಗಿಸುವುದು.

ಉನ್ನತ ಜನಪ್ರತಿನಿಧಿಗಳ ಹಸ್ತಕ್ಷೇಪ ನಿಲ್ಲಿಸುವುದು. ಪಂ. ಸಿಬ್ಬಂದಿಗಳ ಬೇಡಿಕೆ ಈಡೇರಿಸುವುದು. ಗ್ರಾಮಸ್ವರಾಜ್ ಗೆ ಇನ್ನಷ್ಟು ಬಲ ನೀಡಲು ಶೆಟ್ಟಿಯವರು ಒತ್ತಾಯಿಸಿದರು.

ಸಂವಾದದಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಕಾರ್ಯದರ್ಶಿ ಖುಶವಂತ ಸೇಠಿ, ಜಂಟಿ ಕಾರ್ಯದರ್ಶಿ (ಹಣಕಾಸು) ರೇಖಾ ಭಾಗವತ್, ಹಿಮಾಚಲಪ್ರದೇಶ ಪ್ರತಿನಿಧಿ ರಾಜ್ಕುಮಾರ್, ಪಂಜಾಬ್ ಪ್ರತಿನಿಧಿ ಪಲ್ಲವಿ ಠಾಕೂರ್, ಉತ್ತರಾಖಂಡದ ಬಲವಂತ್ ಸಿಂಗ್ ರಾವತ್, ಹರಿಯಾಣದ ಪ್ರವೀಣ್ ಕೌರ್ ಭಾಗವಹಿಸಿದ್ದರು.

ಬೆಳಪು ಗ್ರಾಪಂ ಪಿಡಿಒ ಎಚ್.ಆರ್.ರಮೇಶ್, ಸಂಪನ್ಮೂಲ ವ್ಯಕ್ತಿ ಜಯವಂತ್ ರಾವ್, ಕಾರ್ಯದರ್ಶಿ ಸುಮಿತ್ರಾ ಆಚಾರ್ಯ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

24/10/2020 10:07 pm

Cinque Terre

10.55 K

Cinque Terre

0

ಸಂಬಂಧಿತ ಸುದ್ದಿ