ಉದ್ಯಾವರ: ದೇಶದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರಗಳು ಈ ದೇಶದ ಸಂವಿಧಾನವನ್ನು ಶಿಥಿಲಗೊಳಿಸುವಂತಹ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ.
ಸಂವಿಧಾನ ಶಿಥಿಲವಾದರೆ ದೇಶದ ಪ್ರಜಾಪ್ರಭುತ್ವ ನಾಶವಾಗಿ ಸರ್ವಾಧಿಕಾರಿಗಳಿಗೆ ದಾರಿ ಮಾಡಿ ಕೊಡುತ್ತದೆ.
ದೇಶದ ಬಡ ಜನತೆಯ ಬದುಕು ಛಿದ್ರವಾಗುತ್ತದೆ.ಆ ರೀತಿ ಆಗಲು ಕಾಂಗ್ರೆಸ್ ಪಕ್ಷ ಬಿಡೋದಿಲ್ಲ. ಈ ದೇಶದ ಆತ್ಮವಾದ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವ ತ್ಯಾಗಕ್ಕೂ ಸಿದ್ಧ.
ಮುಂಬರುವ ಪಂಚಾಯತ್ ಚುನಾವಣೆ ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ.
ದೇಶ, ರಾಜ್ಯದಲ್ಲಿ ಪ್ರಜಾಪ್ರಭುತ್ವವೇ? ಸರ್ವಾಧಿಕಾರವೇ ? ಎಂಬ ಪ್ರಶ್ನೆಗೆ ಉತ್ತರವನ್ನು ಕೊಡುತ್ತದೆ. ನಾವು ಪ್ರಜಾಪ್ರಭುತ್ವದ ಕಟ್ಟಕಡೆಯ ಸ್ತರವಾದ ಪಂಚಾಯತ್ ನ್ನು ಬಲ ಪಡಿಸಿದಲ್ಲಿ ಮಾತ್ರ ಈ ದೇಶ ಉಳಿಯಬಹುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ 2 ದಿನ ಜರಗಿದ, ಉದ್ಯಾವರ ಗ್ರಾಮ ವ್ಯಾಪ್ತಿಯ 13 ಬೂತುಗಳ ಸಭೆಯಲ್ಲಿ ಭಾಗವಹಿಸಿ ಸೊರಕೆ ಮಾತನಾಡಿದರು.
ರಾಜ್ಯ ಸರಕಾರವಂತೂ ಕೊರೊನಾ ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸಲಾಗದೆ ಸೋತಿದೆ. ಜನ ಆತಂಕದಿಂದ ಬದುಕುತ್ತಿದ್ದಾರೆ.
ಆದರೆ ಸರಕಾರ ಈ ರೋಗವನ್ನು ದಂಧೆಯನ್ನಾಗಿ ಪರಿವರ್ತಿಸಿಕೊಂಡು ದಿನವನ್ನು ಕಳೆಯುತ್ತಿದೆ. ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸಿ ಸರಕಾರವನ್ನು ಮಾಡಿದ ರಾಜ್ಯ ಸರಕಾರ ಅಭಿವೃದ್ಧಿಯ ದೂರದರ್ಶಿತ್ವ ಇಲ್ಲದೆ ಆಡಳಿತದಲ್ಲಿ ಸೋತಿದೆ ಎಂದರು.
Kshetra Samachara
10/10/2020 05:33 pm