ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಜಮಾಡಿ: ಬಸ್ ಸಂಚಾರ ಸ್ಥಗಿತಗೊಳಿಸಿ ಟೋಲ್ ಗೇಟ್ ಬಳಿ ಪ್ರತಿಭಟನೆ; ಸಂಕಷ್ಟಕ್ಕೀಡಾದ ಪ್ರಯಾಣಿಕರು

ಕಾಪು: ಹೆಜಮಾಡಿ ಒಳ ರಸ್ತೆಗಳಲ್ಲಿ ಸಂಚರಿಸುವ ಖಾಸಗಿ ಸರ್ವೀಸ್ ಬಸ್ಸುಗಳಿಗೆ ಗುರುವಾರ ಬೆಳಗ್ಗೆ ಟೋಲ್ ವಿನಾಯಿತಿ ನೀಡಿ ಮತ್ತೆ ಏಕಾಏಕಿ ಟೋಲ್ ಸಂಗ್ರಹಕ್ಕೆ ಮುಂದಾದ ನವಯುಗ ಕಂಪೆನಿ ಕ್ರಮವನ್ನು ವಿರೋಧಿಸಿದ ಕೆಲ ಖಾಸಗಿ ಸರ್ವೀಸ್ ಬಸ್ ಮಾಲೀಕರು ಟೋಲ್ ನೀಡದೆ ಬಸ್ಸುಗಳನ್ನು ಹಳೆ ಎಂಬಿಸಿ ರಸ್ತೆ ಟೋಲ್ ಕೇಂದ್ರ ಆಸುಪಾಸಿನಲ್ಲಿಯೇ ಪ್ರಯಾಣಿಕರನ್ನಿಳಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಫೆ.15 ರಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸಿ ಎಲ್ಲ ವಾಹನಗಳಿಗೆ ವಿನಾಯಿತಿ ರದ್ದುಗೊಳಿಸಿದ ಪರಿಣಾಮ ಹೆಜಮಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ಸಂಚರಿಸುವ ಸರ್ವೀಸ್ ಬಸ್ಸುಗಳಿಂದಲೂ ನವಯುಗ ಟೋಲ್ ಕಂಪೆನಿ ಗುರುವಾರ ಟೋಲ್ ಸಂಗ್ರಹ ಆರಂಭಿಸಿತು. ಬುಧವಾರವೂ ಟೋಲ್ ಸಂಗ್ರಹ ವಿರೋಧಿಸಿ ಸರ್ವೀಸ್ ಬಸ್ಸುಗಳು ಹಠಾತ್ತಾಗಿ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ ಟೋಲ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದರು. ಆದರೆ, ಗುರುವಾರ ಬೆಳಿಗ್ಗೆ ವಿನಾಯಿತಿ ನೀಡಿದ ಟೋಲ್ ಗುತ್ತಿಗೆದಾರರು ಹಠಾತ್ತಾಗಿ ಖಾಸಗಿ ಸರ್ವೀಸ್ ಬಸ್ಸುಗಳಿಂದ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಕ್ರಮವನ್ನು ಖಂಡಿಸಿ ಟೋಲ್ ಬಳಿ ಹಠಾತ್ತಾಗಿ ಬಸ್ ಸಂಚಾರ ಸ್ಥಗಿತಗೊಳಿಸಿ ಗುರುವಾರ ಪ್ರತಿಭಟನೆ ನಡೆಸಿದರು.ಇದರಿಂದಾಗಿ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅತಂತ್ರರಾದರು.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್ಸುಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಈ ಮಧ್ಯೆ ಬಸ್ ಮಾಲೀಕರು ಜಿಲ್ಲಾಧಿಕಾರಿ ಹಾಗೂ ಸಂಸದರಿಗೆ ಮನವಿ ಸಲ್ಲಿಸಲು ತೆರಳಿದ್ದರು. ಬಸ್ಸಿನವರ ಈ ವರ್ತನೆಯನ್ನು ಕೆಲ ಪ್ರಯಾಣಿಕರು ಖಂಡಿಸಿದ್ದು, ಕೊರೊನಾ ಲಾಕ್ಡೌನ್ ಬಳಿಕ ಬಸ್ ಸಂಚಾರ ಆರಂಭಿಸಿ ನಷ್ಟದ ನೆಪದಲ್ಲಿ ಈಗಾಗಲೇ ಅಧಿಕ ದರವನ್ನು ವಸೂಲಿ ಮಾಡಲಾಗುತ್ತಿದೆ. ಪ್ರತಿಭಟನೆ ನೆಪದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಬಸ್ ನಿಲುಗಡೆ ಮಾಡಿರುವ ಬಸ್ಸುಗಳ ವಿರುದ್ಧ ಸಾರಿಗೆ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಕೆಲ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

Edited By : Nagaraj Tulugeri
Kshetra Samachara

Kshetra Samachara

18/02/2021 07:35 pm

Cinque Terre

3.93 K

Cinque Terre

0