ಮಣಿಪಾಲ: ಅವಶ್ಯ ರೋಗಿಗಳಿಗೆ ರಕ್ತ ಅಥವಾ ಅದರ ಘಟಕಗಳನ್ನು ದಾನ ಮಾಡುವುದು ಆಧುನಿಕ ಆರೋಗ್ಯ ವ್ಯವಸ್ಥೆಯಲ್ಲಿ ಮಾನವೀಯತೆಯ ಬಹುಮುಖ್ಯ ಭಾಗವಾಗಿದೆ. ಇದರ ಕುರಿತು ಜಾಗೃತಿ ಮೂಡಿಸಲು ಮತ್ತು ಸ್ವಯಂಪ್ರೇರಿತ ರಕ್ತದಾನವನ್ನು ಹೆಚ್ಚೆಚ್ಚು ಪ್ರಚುರಪಡಿಸಿ ಪ್ರೋತ್ಸಾಹಿಸಿ ಹೆಚ್ಚಿನ ಜನ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡುವ ದೃಷ್ಟಿಯಿಂದ ಅದಕ್ಕೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಅಕ್ಟೋಬರ್ 1 ರಂದು ಭಾರತದಲ್ಲಿ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತದೆ.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರವು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನು 2021 ರ ಅಕ್ಟೋಬರ್ 1 ರ ಶುಕ್ರವಾರದಂದು ಆಚರಿಸಿತು. ಇದಕ್ಕೆ ಪೂರಕವಾಗಿ ಶಿಬಿರಗಳಿಗೆ ಅಗತ್ಯ ಸಲಕರಣೆಗಳನ್ನು ಕೊಂಡೊಯ್ಯಲು ಮತ್ತು ಸಂಗ್ರಹಿಸಿದ ರಕ್ತವನ್ನು ಸರಿಯಾದ ರೀತಿಯಲ್ಲಿ ಕ್ಲಪ್ತ ಸಮಯದಲ್ಲಿ ರಕ್ತನಿಧಿಗೆ ತಲುಪಿಸಲು ತಯಾರುಗೊಳಿಸಿದ ಸುಸಜ್ಜಿತ ವಾಹನವನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುತ್ತಿರುವ ಮತ್ತು ಇದರ ಮೂಲಕ ಸಾರ್ವಜನಿಕರಲ್ಲಿ ರಕ್ತದಾನ ಮಾಡಲು ಅರಿವು ಮೂಡಿಸುತ್ತಿರುವ ಸಂಘಸಂಸ್ಥೆಗಳನ್ನು ಅಭಿನಂದಿಸಲಾಯಿತು.ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರತ್ ಕುಮಾರ್ ರಾವ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ನೆರೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು , "ರಕ್ತದಾನ ಮಾಡುವವರು ಯಾರು ಮತ್ತು ರಕ್ತ ಸ್ವೀಕರಿಸುವವರು ಯಾರು ಎಂಬುದು ಮುಖ್ಯವಲ್ಲ, ಭವಿಷ್ಯದಲ್ಲಿ ಯಾವಾಗಾದರೂ ರಕ್ತ ದಾನಿಯು ರಕ್ತ ಸ್ವೀಕರಿಸುವವರಾಗಬಹುದು ಅಥವಾ ರಕ್ತ ಪಡೆದವರು ಮುಂದಿನ ದಿನಗಳಲ್ಲಿ ಆರೋಗ್ಯವಂತ ದಾನಿಗಳಾಗಬಹುದು. ಅದಕ್ಕಾಗಿಯೇ ಯಾವುದೇ ಅಪೇಕ್ಷೆಯಿಲ್ಲದೆ ರಕ್ತದಾನ ಮಾಡುವುದು ಜೀವ ಉಳಿಸುವ ಪ್ರಕ್ರಿಯೆಯಲ್ಲಿ ಮಾನವೀಯತೆಯ ಒಂದು ಮಹತ್ವದ ಮತ್ತು ಪ್ರಮುಖ ಭಾಗವಾಗಿದೆ" ಎಂದರು. ಕರ್ನಲ್ ಪ್ರಕಾಶ್ ಚಂದ್ರ ಬಿ, ಡೈರೆಕ್ಟರ್ - ಜನರಲ್ ಸರ್ವೀಸಸ್ ಮಾಹೆ , ಮಣಿಪಾಲ, ಮತ್ತು ಸಿ ಜಿ ಮುತ್ತಣ್ಣ, ಮುಖ್ಯ ನಿರ್ವಹಣಾಧಿಕಾರಿ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದರು.
ಕರ್ನಲ್ ಪ್ರಕಾಶ್ ಚಂದ್ರ ಅವರು ರಕ್ತದಾನದ ಮಹತ್ವದ ಕುರಿತು ಮಾತನಾಡಿದರು ಮತ್ತು "ಎಲ್ಲಾ ಸಂಘ ಸಂಸ್ಥೆಗಳು ರಕ್ತದಾನಕ್ಕಾಗಿ ಜನರನ್ನು ಪ್ರೇರೇಪಿಸಲು ಮುಂದಾಗಬೇಕು" ಎಂದು ಹೇಳಿದರು. ಈ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ರಕ್ತದಾನ ಶಿಬಿರಗಳ ಮೂಲಕ ನಮ್ಮೊಂದಿಗೆ ಕೈಜೋಡಿಸಿರುವ, ಬಿ.ಜೆ.ಪಿ. ಯುವ ಮೋರ್ಚಾ, ಉಡುಪಿ ನಗರ, ಮೊಗವೀರ ಯುವ ಸಂಘಟನೆ (ರಿ .), ಉಡುಪಿ, ಅಭಯಹಸ್ತ ಚಾರಿಟಬಲ್ ಟ್ರಸ್ಟ್ (ರಿ ), ಉಡುಪಿ, ವಿಷ್ಣುಮೂರ್ತಿ ಸ್ನೇಹಿತರು (ರಿ ), ದೊಡ್ಡನಗುಡ್ಡೆ, ಉಡುಪಿ, ಮಿಲಾಗ್ರೆಸ್ ಕಾಲೇಜು, ಕಲ್ಯಾಣಪುರ , ಮಣಿಪಾಲ ಟೆಕ್ನಾಲಜೀಸ್ ಲಿಮಿಟೆಡ್, ಮಣಿಪಾಲ, ಕರಾವಳಿ ಯುವಕರು ಕ್ಲಬ್, ಉಡುಪಿ, ಹಿಂದೂ ಜಾಗರಣ ವೇದಿಕೆ, ಉಡುಪಿ, ಶ್ರೀ ಮಾಧವ ವಾದಿರಾಜ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆ, ಬಂಟಕಲ್, ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು, ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು, ಕುಂಜಿಬೆಟ್ಟು, ಉಡುಪಿ, ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಕಾರ್ಪೆಂಟರ್ಸ್ ಯೂನಿಯನ್ (ರಿ ), ಉಡುಪಿ ಇವರನ್ನು ಅಭಿನಂದಿಸಲಾಯಿತು.
ಡಾ. ಶಮೀ ಶಾಸ್ತ್ರಿ, ಪ್ರೊಫೆಸರ್ ಮತ್ತು ಮುಖ್ಯಸ್ಥರು , ಇಮ್ಯುನೊಹೆಮಾಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗ, ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಮಣಿಪಾಲ ಇವರು ಅಫೆರೆಸಿಸ್ ದಾನ ಮತ್ತು ಸ್ಟೆಮ್ ಸೆಲ್ ದಾನ ಸೇರಿದಂತೆ ವಿಶೇಷ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಉಲ್ಲೇಖಿಸಿದರು.
Kshetra Samachara
01/10/2021 03:19 pm