ಕೋಟ: ಕೋಟ ಗ್ರಾಪಂ ವ್ಯಾಪ್ತಿಯ ಕಾಸನಗುಂದು ಪರಿಸರದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ಆರು ಮಹಿಳೆಯರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ನಡೆದಿದೆ.
ಶುಕ್ರವಾರ ಸಂಜೆ ಕೃಷಿ ಕಾರ್ಯ ನಿಮಿತ್ತ ಗದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭ ಏಕಾಏಕಿ ಹೆಜ್ಜೇನು ಹಿಂಡು ಈ ಮಹಿಳೆಯರ ಮೇಲೆ ದಾಳಿ ಮಾಡಿದ್ದು, ಐವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರಲ್ಲಿ ಪ್ರೇಮಾ ಹಾಗೂ ಬುಡ್ಡು ಎಂಬವರಿಗೆ ಹೆಜ್ಜೇನು ಅತಿಯಾಗಿ ಕಚ್ಚಿದ ಪರಿಣಾಮ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇವರಲ್ಲಿ ಕಾವೇರಿ,ಪದ್ದು,ಸುಶೀಲಾ ಮೂವರು ಕೋಟೇಶ್ಚರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಬ್ಬಾಕೆ ಲಚ್ಚಿ ಕೋಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪರಿಸರದ ಚಂದ್ರ ಪೂಜಾರಿ ಕದ್ರಿಕಟ್ಟು ಹಾಗೂ ಗೋವಿಂದ ಮರಕಾಲ,ಅಶೋಕ ,ಮಂಜು,ಆದಿತ್ಯ,ಶ್ರೀನಿಧಿ,ನೀಲು ಎನ್ನುವವರು ಗ್ರಾಮಸ್ಥರ ನೆರವಿನೊಂದಿಗೆ ಆಸ್ಪತ್ರೆಗೆ ಸ್ಥಳಾಂತರಿಸುವಲ್ಲಿ ಸಹಕರಿಸಿದರು.
ಜೇನುಗೂಡಿಗೆ ಹದ್ದು ದಾಳಿ ಮಾಡಿದ ಪರಿಣಾಮ ಹೆಜ್ಜೇನು ಎಲ್ಲೆಂದರಲ್ಲಿ ಹಾರಿ ಹೋಗಿರಬಹುದು. ಅದು ಶೇಂಗಾ ಗದ್ದೆಯಲ್ಲಿ ಕಳೆ ತೆಗೆದು ವಾಪಸ್ ಹೋಗುವ ಆ ಮಹಿಳೆಯರ ಮೇಲೆ ಎರಗಿದೆ ಎನ್ನಲಾಗಿದೆ.
* ಸಾಹಸ ಮೆರೆದ ಸಿಂಚನಾ: ಜೇನುನೊಣ ದಾಳಿ ಮಾಡುತ್ತಿದ್ದಂತೆಯೇ ಕೂಗಿಕೊಂಡು ಮಹಿಳೆಯರು ಅಲ್ಲಿರುವ ಮನೆ ಒಳಗೆ ಹೋಗಲು ಯತ್ನಿಸಿದರು.
ಅಷ್ಟರಲ್ಲಿ ಸಿಂಚನಾ ಎಂಬ ಯುವತಿ ತನ್ನ ಜೀವ ಲೆಕ್ಕಿಸದೆ ಆ ಮಹಿಳೆಯರನ್ನು ಪಾರು ಮಾಡಲು ಯತ್ನಿಸಿದ್ದಾರೆ.
ಅಲ್ಲದೆ, 108 ಆ್ಯಂಬುಲೆನ್ಸ್ ಗೆ ಕಾಲ್ ಮಾಡಿ ಆಸ್ಪತ್ರೆಗೆ ಸ್ಥಳಾಂತರಿಸಲು ಸಹಕರಿಸಿದ್ದಾರೆ.
ಹೆಜ್ಜೇನು ದಾಳಿ ಮಾಡಿದ ನಂತರ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕೊಂಡ್ಯೊಯ್ದಾಗ ಅಲ್ಲಿನ ವಿಳಂಬ ಕಂಡು ಗ್ರಾಮಸ್ಥರು ಖಾಸಗಿ ಆಸ್ಪತ್ರೆ ಗೆ ದಾಖಲಿಸಿದ್ದಾರೆ.
ಇದೀಗ ಕೋಟೇಶ್ವರ ಹಾಗೂ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಈ ಮಹಿಳೆಯರು ಚಿಕಿತ್ಸೆ ಪಡೆಯುತ್ತಿದ್ದಾರೆ.
Kshetra Samachara
19/12/2020 01:02 pm