ಪಡುಬಿದ್ರೆ: ಚೆನ್ನೈಯ ಹಸಿರು ಪೀಠವು ಪಡುಬಿದ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಕಲ್ಲಿದ್ದಲು ಆಧರಿತ ಉಷ್ಣವಿದ್ಯುತ್ ಸ್ಥಾವರಕ್ಕೆ (ಯುಪಿಸಿಎಲ್) 52 ಕೋಟಿ ರೂ. ದಂಡ ವಿಧಿಸಿದೆ. ನಂದಿಕೂರು ಜನಜಾಗೃತಿ ಸಮಿತಿಯು 2005ರಲ್ಲಿ ಹೂಡಿದ್ದ ದಾವೆಯ ವಿಚಾರದಲ್ಲಿ ಈ ದಂಡ ವಿಧಿಸಲಾಗಿದೆ.
ಉಡುಪಿ ಜಿಲ್ಲೆಯ ಎಲ್ಲೂರು ಗ್ರಾಮದಲ್ಲಿರುವ ಕಲ್ಲಿದ್ದಲು ಆಧಾರಿತ ಉಡುಪಿ ಪವರ್ ಕಾರ್ಪೊರೇಶನ್ (ಯುಪಿಸಿಎಲ್) ಪರಿಸರ ನಿಯಮಗಳನ್ನು ಉಲ್ಲಂಸಿರುವುದು ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವುದನ್ನು ಪರಿಗಣಿಸಿ 52 ಕೋಟಿ, 2 ಲಕ್ಷದ 50 ಸಾವಿರ ರೂ. ದಂಡ ಪಾವತಿಸುವಂತೆ ಆದೇಶಿಸಿದೆ. ಹಸಿರು ಪೀಠವು ಎಲ್ಲ ಮೊತ್ತವನ್ನು ಮುಂದಿನ ಮೂರು ತಿಂಗಳುಗಳೊಗಾಗಿ ಕೇಂದ್ರಿಯ ಪರಿಸರ ನಿಯಂತ್ರಣಾ ಮಂಡಳಿಗೆ ಪಾವತಿಸುವಂತೆ ಸೂಚಿಸಿದೆ. ಈ ದಂಡವನ್ನು ಪರಿಸರ ಸುರಕ್ಷೆಗಾಗಿ ಮತ್ತೆ ಬಳಸಿಕೊಳ್ಳುವಂತೆಯೂ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ನಿರ್ದೇಶಿಸಿದೆ.
ಯುಪಿಸಿಎಲ್ ಪರಿಸರದ 10 ಕಿ.ಮೀ. ಪ್ರದೇಶದಲ್ಲಿ ಪರಿಸರ, ಬೆಳೆ ಹಾನಿ, ಮಣ್ಣಿನ ಫಲವತ್ತತೆಯ ಪರೀಕ್ಷೆ, ಕಪ್ಪು ವರ್ಣಕ್ಕೆ ತಿರುಗಿರುವ ನೀರು ಹಾಗೂ ಗಾಳಿಯ ಗುಣಮಟ್ಟ ಪರಿಶೀಲನೆಗಳನ್ನು ಪ್ರತಿಯೋರ್ವ ರೈತ ಹಾಗೂ ಪರಿಸರದ ಮನೆ ಮಂದಿಯನ್ನೂ ಸೇರಿದಂತೆ ಭೇಟಿ ಮಾಡಿ ಯುಪಿಸಿಎಲ್‌ನಿಂದಾಗಿರುವ ನಷ್ಟವನ್ನು ಅಂದಾಜಿಸಲು ಸಮಿತಿಯೊಂದನ್ನು ರಚಿಸುವಂತೆಯೂ ಹಸಿರು ಪೀಠವು ಆದೇಶಿಸಿದೆ.ಸಮಿತಿಯು ಅಂದಾಜಿಸುವ ನಷ್ಟದ ಮೊತ್ತವನ್ನು ಯುಪಿಸಿಎಲ್ ಮೂಲಕ ರೈತರಿಗೆ, ಸಂತ್ರಸ್ತರಿಗೆ ತಲಪುವಂತೆಯೂ ನೋಡಿ ಕೊಳ್ಳಬೇಕೆಂದು ಪೀಠವು ಆದೇಶಿಸಿದೆ.
PublicNext
02/06/2022 11:50 am