ಮಂಗಳೂರು: ಕಾಂಕ್ರೀಟ್ ರಸ್ತೆಯೇ ಪಿಚ್, ಅಡ್ಡರಸ್ತೆಯೇ ಕ್ರಿಕೆಟ್ ಗ್ರೌಂಡ್ ! ಸುತ್ತಲೂ ಇರೋ ಕಟ್ಟಡಗಳೇ ಆಡಿಯೆನ್ಸ್ ಗ್ಯಾಲರಿ. ಈ ನಡುವೆಯೇ ನಡೆಯುತ್ತೆ ನೋಡಿ ರನ್ ಕದಿಯೋ ಕಸರತ್ತು... ಅಂದಹಾಗೆ ಇದ್ಯಾವ ಪರಿಯ ಕ್ರಿಕೆಟ್ ಅಂತೀರಾ!
ಸದಾ ಗಿಜಿಗಿಡುವ ಬಂದರು ಬಳಿಯ ಕಂದಕ ಅನ್ನೋ ಪ್ರದೇಶದ ಅಡ್ಡರಸ್ತೆಯೊಂದು ಸದ್ಯ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ. ಹಗಲಿಡೀ ಜನರ, ವಾಹನಗಳ ಓಡಾಟಕ್ಕೆ ಇರೋ ರಸ್ತೆ ರಾತ್ರಿಯಾಗುತ್ತಲೇ ‘ಗಲ್ಲಿ ಪ್ರೀಮಿಯರ್ ಲೀಗ್’ ಮೈದಾನವಾಗುತ್ತದೆ! ಅದೂ ಕೂಡ ಹೊನಲು ಬೆಳಕಿನ ಗಲ್ಲಿ ಕ್ರಿಕೆಟ್ ಖುಷಿ ಆಸ್ವಾದಿಸಲು ಪ್ರೇಕ್ಷಕರು ಕಾತುರರಾಗಿರುತ್ತಾರೆ.
ಹಿಂದಿನಿಂದಲೂ ಬಂದರು ಪ್ರದೇಶದಲ್ಲಿರೋ ಹುಡುಗರು ಕಂದಕದ ಈ ಅಡ್ಡರಸ್ತೆಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಇದೀಗ ಗಲ್ಲಿ ಪ್ರೀಮಿಯರ್ ಲೀಗ್ ಅನ್ನೋ ಹೆಸರಿನಡಿ ಪಂದ್ಯಾವಳಿ ಆರಂಭಿಸಿದ್ದು, 6 ತಂಡಗಳಿವೆ. ಸುತ್ತಲೂ ಇರೋ ಕಟ್ಟಡಗಳ ಮಧ್ಯೆಯೇ ರನ್ ಕದಿಯಲು ಬ್ಯಾಟರ್ ಗಳು ತೋರುವ ಚಾಕಚಕ್ಯತೆ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತವೆ.
ʼಸರೋಜಿನಿ ಪುಂಡಲೀಕ ಕರ್ಕೇರʼ ಸ್ಮರಣಾರ್ಥ ಮೊದಲ ಬಾರಿಗೆ ಆಯೋಜಿಸಲಾದ ಈ ಗಲ್ಲಿ ಕ್ರಿಕೆಟ್ ಕೂಟ ಜ. 26ರ ವರೆಗೆ ನಡೆಯಲಿದ್ದು, ಬಂದರು ಪರಿಸರದಲ್ಲಿ ಹಬ್ಬದ ವಾತಾವರಣ ಮೂಡಿಸಿದೆ. ಪ್ರತಿದಿನ ಅಂಡರ್ ಆರ್ಮ್ ನಿಗದಿತ ಓವರ್ ನ 3 ಪಂದ್ಯ ನಡೆಯುತ್ತವೆ. ಆಯೋಜಕರು ಶಿಸ್ತು- ಅಚ್ಚುಕಟ್ಟುತನದಿಂದ ಪಂದ್ಯ ನಡೆಸುತ್ತಿರುವುದು ಪ್ಲಸ್ ಪಾಯಿಂಟ್.
Kshetra Samachara
25/01/2022 02:22 pm