ಮಂಗಳೂರು: ವಿಶ್ವಾದ್ಯಂತ ಕ್ರೀಡಾಪಟು ದಂಪತಿ ಬಹಳಷ್ಟು ಮಂದಿಯಿದ್ದಾರೆ. ಇದೀಗ ಅದಕ್ಕೆ ನೂತನ ಸೇರ್ಪಡೆ ಎಂ.ಆರ್.ಪೂವಮ್ಮ ಹಾಗೂ ಜಿತಿನ್ ಪೌಲ್. ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಕರ್ನಾಟಕದ ಅಥ್ಲೀಟ್ ಎಂ.ಆರ್. ಪೂವಮ್ಮ ಇಂದು ಕೇರಳದ ಅಥ್ಲೀಟ್ ಜಿತಿನ್ ಪೌಲ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ವಿವಾಹ ನೆರವೇರಿದ್ದು, ಜ.1ರಂದು ಕೇರಳದ ತ್ರಿಶೂರ್‌ನಲ್ಲಿ ಔತಣಕೂಟ ನಡೆಯಲಿದೆ.
ಪೂವಮ್ಮ ಹಾಗೂ ಜಿತಿನ್ ಬಹುಕಾಲದ ಸ್ನೇಹಿತರು. ಕೊಡಗು ಮೂಲದ 31ರ ಹರೆಯದ ಪೂವಮ್ಮ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ. 2014ರ ಇಂಚೋನ್ ಏಷ್ಯಾಡ್‌ನಲ್ಲಿ 1 ಸ್ವರ್ಣ, 1 ಕಂಚು ಹಾಗೂ 2018ರ ಜಕಾರ್ತಾ ಏಷ್ಯಾಡ್‌ನಲ್ಲಿ 2 ಸ್ವರ್ಣ ಪದಕ ಪಡೆದಿದ್ದರು. 2008ರ ಬೀಜಿಂಗ್ ಮತ್ತು 2016ರ ರಿಯೋ ಒಲಿಂಪಿಕ್ಸ್ ರಿಲೇ ತಂಡದಲ್ಲಿ ಭಾಗವಹಿಸಿದ್ದರು. ಗಾಯದ ಸಮಸ್ಯೆಯಿಂದಾಗಿ ಅವರಿಗೆ 2021ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.
ಮಂಗಳೂರು ಒಎನ್‌ಜಿಸಿ ಉದ್ಯೋಗಿ ಪೂವಮ್ಮ 2015ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಏಷ್ಯಾಡ್- ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದ ಜಿತಿನ್ ಪೌಲ್ ಪುಣೆಯಲ್ಲಿ ಆದಾಯ ತೆರಿಗೆ ಅಧಿಕಾರಿಯಾಗಿದ್ದಾರೆ.
PublicNext
29/12/2021 06:19 pm