ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದಲ್ಲಿ ಅಸಹಜ ಸಾವು ಸಂಭವಿಸಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ಅಷ್ಟಮಂಗಲ ಪ್ರಶ್ನೆಯ ಮೊರೆ ಹೋಗಿದ್ದಾರೆ. ದೇಗುಲವನ್ನು ಜೀರ್ಣೋದ್ಧಾರ ಮಾಡುವಂತೆ ದೈವ ನುಡಿದಿದೆ ಎಂದು ಹೇಳಲಾಗುತ್ತಿದೆ. ಗ್ರಾಮದಲ್ಲಿ ಪದೇ ಪದೆ ಸಾವು ಸಂಭವಿಸುತ್ತಿರುವ ಕಾರಣ ಜನರು ಅಷ್ಟಮಂಗಲ ಪ್ರಶ್ನೆ ಕೇಳಿದ್ದರು.
ಅಸಹಜ ಸಾವು, ನಾಗರಹಾವು ಮರಣ, ಗ್ಯಾಸ್ ಸ್ಫೋಟ ದುರಂತದಲ್ಲಿ ಗ್ರಾಮದ 11 ಮಂದಿ ಮೃತಪಟ್ಟಿದ್ದರು. ಈ ದುರಂತ ಕುರಿತು ಗ್ರಾಮದ ಜನತೆ ತಲೆ ಕೆಡಿಸಿಕೊಂಡಿತ್ತು. ಅಷ್ಟಮಂಗಲ ಪ್ರಶ್ನೆ ಪ್ರಕಾರ ದೇಗುಲ ಜೀರ್ಣೋದ್ಧಾರ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.
ಇದೇ ರೀತಿಯ ಕಥಾ ಹಂದರವಿಟ್ಟುಕೊಂಡು ರಿಷಬ್ ಶೆಟ್ಟಿ "ಕಾಂತಾರ" ಸಿನಿಮಾ ಮಾಡಿದ್ದಾರೆ. ಕಾಂತಾರದ ಭಾರಿ ಯಶಸ್ಸು ಹಸಿರಾಗಿರುವಾಗಲೇ ಜಿಲ್ಲೆಯಲ್ಲಿ ಶುರುವಾಗಿದೆ ಈ ಘಟನೆಯ ಚರ್ಚೆ. 500 ವರ್ಷಗಳ ಹಿಂದೆ ಆರಾಧಿಸಲ್ಪಡುತ್ತಿದ್ದ ದೈವಗಳ ನಿರ್ಲಕ್ಷ್ಯವೇ ಈ ದುರಂತಗಳಿಗೆ ಕಾರಣ ಎನ್ನಲಾಗಿದೆ!
ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿಸಿದಂತೆ ಹಲವು ಕಡೆ ದೈವಕ್ಕೆ ಸಂಬಂಧಿಸಿದ ಮೂರ್ತಿ, ಕತ್ತಿಗಳು ಪತ್ತೆಯಾಗಿವೆ. ಕಾಡು ತುಂಬಿದ ಸ್ಥಳದಲ್ಲಿ ಮರೆಯಾಗಿದ್ದ ದೈವಸ್ಥಾನವನ್ನು ಗ್ರಾಮಸ್ಥರು ಪತ್ತೆ ಮಾಡಿದ್ದಾರೆ. ಹಾಗೆಯೇ ದೈವದ ಕೋಪ ತಣಿಸಲು ಮುಂದಾಗಿದ್ದಾರೆ.
ದೈವದ ಕುರುಹು ಸಿಕ್ಕಿದ ಜಾಗದಲ್ಲೇ ದೈವಸ್ಥಾನ ಕಟ್ಟಲು ತಯಾರಿ ನಡೆಸಿದ್ದು, ಈಗಾಗಲೇ ಕಾಮಗಾರಿ ಬಹುತೇಕ ಮುಗಿದಿದೆ. ಸಾರ್ವಜನಿಕರಲ್ಲಿ ಚಂದಾ ಎತ್ತಿ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ದೈವಸ್ಥಾನದ ಕಾರ್ಯ ಆರಂಭಗೊಂಡ ಬಳಿಕ ದುರಂತ ಕಡಿಮೆಯಾಗಿವೆ.
PublicNext
10/10/2022 08:15 am