ಮಂಗಳೂರು: ಕೇರಳದ ಮಲಪ್ಪುರಂನಿಂದ ಪವಿತ್ರ ಹಜ್ ಯಾತ್ರೆಗೆ ಕಾಲ್ನಡಿಗೆಯಲ್ಲಿ ಹೊರಟಿರುವ ಶಿಹಾಬ್ ಚೊಟ್ಟೂರು ಕೇರಳ ರಾಜ್ಯ ದಾಟಿ ಕರ್ನಾಟಕ ಗಡಿ ತಲುಪಿದಾಗ ಸ್ವಾಗತ ಕೋರಲಾಯಿತು. ತಲಪಾಡಿ ಗಡಿ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸಿದ್ದು, ನೂರಾರು ಮಂದಿ ಭವ್ಯ ಸ್ವಾಗತ ನೀಡಿದರು.
ಸುಮಾರು 8600ಕ್ಕೂ ಅಧಿಕ ಕಿ.ಮೀ. ದೂರದಲ್ಲಿರುವ ಪವಿತ್ರ ಮೆಕ್ಕಾವನ್ನು 9 ತಿಂಗಳ ಅವಧಿಯ ಕಾಲ್ನಡಿಗೆಯಲ್ಲೇ ಕ್ರಮಿಸುವ ಸಂಕಲ್ಪ ಮಾಡಿರುವ ಶಿಹಾಬ್, ತಲಪಾಡಿ ಪ್ರವೇಶಿಸುತ್ತಲೇ ನೂರಾರು ಮಂದಿ ಬರಮಾಡಿಕೊಂಡರು. ನಿನ್ನೆ ಕೇರಳದ ಹೊಸಂಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಶಿಹಾಬ್ ಕೆಲವು ಹೊತ್ತು ವಿಶ್ರಾಂತಿ ಪಡೆದು ಬಳಿಕ ಯಾತ್ರೆ ಮುಂದುವರಿಸಿದರು. ಕೋಟೆಕಾರ್ ಸಮೀಪದ ಬೀರಿಯ ಮಸೀದಿಯಲ್ಲಿ ಮಗ್ರಿಬ್ ನಮಾಝ್ ನಿರ್ವಹಿಸಿದ ಶಿಹಾಬ್ ಅವರಿಗೆ ಸಾರ್ವಜನಿಕರು ಶುಭಕೋರಿದರು.
ಈ ಸಂದರ್ಭದಲ್ಲಿ ಭಾರೀ ಜನಜಂಗುಳಿ, ನೂಕು ನುಗ್ಗಲು ಉಂಟಾಗಿ ಶಿಹಾಬ್ ಅವರಿಗೆ ಸಾವಧಾನವಾಗಿ ನಡೆಯುವುದೇ ಕಷ್ಟವಾಯಿತು. ತಲಪಾಡಿಯಿಂದ ಬೀರಿವರೆಗೂ ಅವರನ್ನು ಸುತ್ತುವರೆದು ಹಿಂಬಾಲಿಸಿಕೊಂಡು ಬಂದ ಜನರ ಅತ್ಯುತ್ಸಾಹ ನೂಕಾಟ, ತಳ್ಳಾಟಕ್ಕೂ ಕಾರಣವಾಯಿತು. ನಗರದ ಪಂಪ್‌ವೆಲ್‌ನ ತಖ್ವಾ ಮಸ್ಜಿದ್‌ನಲ್ಲಿ ರಾತ್ರಿ ಅವರು ತಂಗಿದ್ದರು.
PublicNext
10/06/2022 05:37 pm