ಪಬ್ಲಿಕ್ ನೆಕ್ಸ್ಟ್ ವಿಶೇಷ : ವಿಶ್ವನಾಥ ಪಂಜಿಮೊಗರು
ಮಂಗಳೂರು: ವಾರಣಾಸಿಯ ಜ್ಞಾನವಾಪಿ ಮಸೀದಿ, ಮಥುರಾ ಶಾಹಿ ಈದ್ಗಾ ಮಸೀದಿಯ ವಿವಾದ ದೇಶಾದ್ಯಂತ ಭಾರೀ ಸಂಚಲ ಮೂಡಿಸಿರುವಾಗಲೆ ಇಲ್ಲಿಯ ಮಸೀದಿಯೊಂದರಲ್ಲಿ ದೇವಾಲಯ ಕಟ್ಟಡ ಕಾಣಿಸಿಕೊಂಡಿರುವುದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.
ಜ್ಯೋತಿಷಿಯೊಬ್ಬರು ನಡೆಸಿದ ತಾಂಬೂಲ ಪ್ರಶ್ನೆಯಲ್ಲಿ ಇಲ್ಲಿ ದೇವಾಲಯವೊಂದು ಇತ್ತು ಎಂಬ ಉತ್ತರ ದೊರಕಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ವಿವಾದ ನ್ಯಾಯಾಲಯದ ಮೂಲಕವೇ ತೀರ್ಮಾನವಾಗ ಬೇಕಾಗಿರುವುದರಿಂದ ತಾಂಬೂಲ ಪ್ರಶ್ನೆ ಉತ್ತರಗಳಿಗೆ ಗಣನೆಗೆ ಬಾರದು. ಕೋರ್ಟ ಕೇವಲ ದಾಖಲೆಗಳ ಆಧಾರದ ಮೇಲೆ ಕ್ರಮಕೈಗೊಳ್ಳುತ್ತೆ.
ಆದರೂ ಈ ಭಾಗದ ಜನತೆಗೆ ತಾಂಬೂಲ ಪ್ರಶ್ನೆ ಮೇಲೆ ಭಾರಿ ನಂಬಿಕೆ.
ಹೌದು... ಎಪ್ರಿಲ್ 21ರಂದು ನಗರದ ಹೊರವಲಯದ ಮಳಲಿಯಲ್ಲಿರುವ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ನವೀಕರಣ ನಡೆದಾಗ ಮುಂಭಾಗದಲ್ಲಿ ದೇವಾಲಯ ಪತ್ತೆಯಾಗಿದೆ. ಆದರೆ ಯಾವುದೇ ಸಂಘರ್ಷಕ್ಕೆ ಕಾರಣವಾಗಬಾರದಿಂದು ಕೋರ್ಟ್ ಮೂಲಕ ಮಸೀದಿ ನವೀಕರಣ ಕಾರ್ಯಕ್ಕೆ ಸಂಪೂರ್ಣ ತಡೆ ನೀಡಲಾಗಿದೆ.
ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂಬುದು ವಿಶ್ವ ಹಿಂದೂ ಪರಿಷತ್ ವಾದ. ನ್ಯಾಯಾಲಯದ ವಿಚಾರಣೆಯ ನಡುವೆಯೇ ಮಸೀದಿಯಲ್ಲಿ ದೈವಸಾನಿಧ್ಯವಿತ್ತೇ ಎಂಬ ಬಗ್ಗೆ ಉತ್ತರ ಕಂಡುಕೊಳ್ಳಲು ತಾಂಬೂಲ ಪ್ರಶ್ನೆ ಇಡಲಾಗಿತ್ತು. ಕೇರಳದ ಪ್ರಖ್ಯಾತ ಜೋತಿಷಿ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ನಡೆಸಿದ ತಾಂಬೂಲ ಪ್ರಶ್ನೆಯಲ್ಲಿ ಈ ಮಸೀದಿಯಿದ್ದ ಸ್ಥಳದಲ್ಲಿ ಹಿಂದೆ ಗುರು ಮಠವಿತ್ತು ಆಗ ಶೈವ ಆರಾಧನೆಯು ಅಲ್ಲಿ ನಡೆಯುತ್ತಿತ್ತು ಎಂಬ ವಿಚಾರ ತಿಳಿದು ಬಂದಿದೆ.
ಒಂಭತ್ತು ವೀಳ್ಯದೆಲೆಯಲ್ಲಿ ಪೊದುವಾಳ್ ಅವರು ತಾಂಬೂಲ ಪ್ರಶ್ನಾಚಿಂತನೆಯಲ್ಲಿ ಅನೇಕ ವಿಷಯಗಳು ಬೆಳಕಿಗೆ ಬಂದಿವೆ.
ಆ ಎಲೆಗಳ ಪ್ರಕಾರ ಇಲ್ಲಿನ ದೈವಸಾನಿಧ್ಯ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ, ಈ ಜಾಗದಲ್ಲಿ ಇದ್ದ ಜಲಮೂಲವೊಂದು ನಾಶವಾಗಿರುವುದು ಗೋಚರವಾಗಿದೆ. ಇಲ್ಲಿ ಹಿಂದೆ ಇದ್ದವರು ಸ್ಥಳಾಂತರಗೊಂಡಿದ್ದಾರೆ, ಇಲ್ಲಿ ಆರಾಧನೆಯಾಗುತ್ತಿದ್ದ ದೈವ ಸಾನಿಧ್ಯವು ಇನ್ನೆಲ್ಲೋ ಆರಾಧನೆಗೊಳ್ಳುತ್ತಿದೆ. ಆದರೆ ಇಲ್ಲಿಂದ ದೈವ ಸಾನಿಧ್ಯವು ಸಂಪೂರ್ಣವಾಗಿ ಹೋಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅರ್ಧದಷ್ಟು ದೈವಸಾನಿಧ್ಯವು ಮಸೀದಿಯಿರುವ ಪ್ರದೇಶದಲ್ಲಿಯೇ ಇದೆ ಎಂಬುದು ಪ್ರಶ್ನಾಚಿಂತನೆಯಲ್ಲಿ ಸ್ಪಷ್ಟವಾಗಿದೆಯಂತೆ.
ದ.ಕ.ಜಿಲ್ಲೆಯಲ್ಲಿ ಮೊದಲ ಬಾರಿಗೆ ತಾಂಬೂಲ ಪ್ರಶ್ನೆಯೊಂದು ಭಾರಿ ಸುದ್ದಿ ಮಾಡಿದೆ. ತಾಂಬೂಲ ಪ್ರಶ್ನಾಚಿಂತನೆ ಬಗ್ಗೆ ಕಾಂಗ್ರೆಸ್ ನಾಯಕರು ಕಿಡಿಕಾರುತ್ತಿದ್ದಾರೆ. ಆದರೆ ಮಸೀದಿಯ ಆಡಳಿತ ಸಮಿತಿ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
PublicNext
25/05/2022 06:59 pm