ಮಂಗಳೂರು: ಕರ್ನಾಟಕ ರಾಜ್ಯ ಹಜ್ ಸಮಿತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಿಂದ ಯಾತ್ರೆ ಕೈಗೊಳ್ಳುವ 266 ಮಂದಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭವು ಬೈಕಂಪಾಡಿಯ ಅಡ್ಕ ಸಮುದಾಯ ಭವನದಲ್ಲಿ ಇಂದು ನಡೆಯಿತು.
ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಉದ್ಘಾಟಿಸಿ ಮಾತನಾಡಿ, ದುರಾದೃಷ್ಟವಶಾತ್ ಈ ಬಾರಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ವಿಮಾನ ಯಾನವಿಲ್ಲ. ಆದ್ದರಿಂದ ದ.ಕ., ಉಡುಪಿ, ಕೊಡಗು ಜಿಲ್ಲೆಯ ಯಾತ್ರಾರ್ಥಿಗಳು ಬೆಂಗಳೂರು ಮೂಲಕ ಹಜ್‌ಗೆ ತೆರಳುವಂತೆ ಸರ್ಕಾರದಿಂದ ಸೂಚನೆ ನೀಡಿದೆ. ಮಂಗಳೂರಿನಿಂದ ಯಾತ್ರಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಮಂಗಳೂರಿನಿಂದ ಹಜ್ ವಿಮಾನ ನಿರಾಕರಣೆ ಮಾಡಿದೆ. ಆದರೆ ಈ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಿಲ್ಲ. ಇದರಲ್ಲಿ ರಾಜಕೀಯವಿದೆಯೇ ಎಂದು ತಿಳಿದಿಲ್ಲ. ಕೇವಲ ಮಂಗಳೂರು ಮಾತ್ರವಲ್ಲದೆ ತಮಿಳುನಾಡಿನಿಂದ ಹಜ್ ಯಾತ್ರೆಗೆ ವಿಮಾನ ಸೌಲಭ್ಯವಿಲ್ಲ. ಅಲ್ಲಿನ ಹಜ್ ಯಾತ್ರಿಗಳಿಗೆ ಮುಂಬೈ ಮೂಲಕ ಪ್ರಯಾಣಿಸುವಂತೆ ಸೂಚಿಸಿಲಾಗಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ ಎನ್‌ಕೆಎಂ ಶಾಫಿ ಸಅದಿ ಮಾತನಾಡಿ, ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತದೆ. ಹಜ್ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ ಸೂಕ್ತ ಜಾಗ ಲಭಿಸಿಲ್ಲ. ಜಾಗ ಸಿಕ್ಕಿದೊಡನೆ ಹಜ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮುಂದಿನ ವರ್ಷ ನಮ್ಮ ಎಲ್ಲಾ ಹಜ್ ಕಾರ್ಯಕ್ರಮವು ಹಜ್ ಭವನದಲ್ಲಿಯೇ ನಡೆಯಲಿ ಎಂದು ಆಶಿಸಿದರು.
Kshetra Samachara
24/05/2022 11:03 pm