ಮಂಗಳೂರು: ವಿಶ್ವಶಾಂತಿಗಾಗಿ ಪ್ರಾರ್ಥಿಸಬೇಕಾದ ತುರ್ತು ಅನಿವಾರ್ಯತೆಯಲ್ಲಿದ್ದೇವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕರೆ ನೀಡಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಸಂಭ್ರಮದಲ್ಲಿ ಶಿವ ಪಂಚಾಕ್ಷರಿ ಜಪಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಷ್ಯಾ-ಉಕ್ರೇನ್ ಯುದ್ಧಕ್ಕೆ ಕಳವಳ ವ್ಯಕ್ತಪಡಿಸಿ, ನೆರೆಮನೆಯಲ್ಲಿ ಬೆಂಕಿ ಬಿದ್ದಿದೆ ಎಂದರೆ ನಾವು ಸುಮ್ಮನಿರುವಂತಿಲ್ಲ. ನಮ್ಮ ಮನೆಯನ್ನು ಸುರಕ್ಷಿತವಾಗಿಡಲು ನಾವು ಪ್ರಯತ್ನ ಪಡಬೇಕು. ಇಲ್ಲದಿದ್ದಲ್ಲಿ ಅಲ್ಲಿನ ಒಂದು ಕಿಡಿ ಇತ್ತ ಹಾರಿದರೆ ನಮ್ಮ ಮನೆಯೂ ಸುಟ್ಟು ಬೂದಿಯಾಗಬಹುದು ಎಂದು ಹೇಳಿದರು.
ಅಲ್ಲೆಲ್ಲೋ ಯುದ್ಧ ನಡೆಯುತ್ತಿದೆ. ನಮಗೇನೂ ತೊಂದರೆಯಿಲ್ಲ ಎಂಬ ತಿರಸ್ಕಾರ ಭಾವನೆಯನ್ನು ನಾವು ಇಟ್ಟುಕೊಳ್ಳುವಂತಿಲ್ಲ. ಮಾನವೀಯತೆಯೆಂದರೆ ಸಣ್ಣ ಕ್ರಿಮಿಕೀಟಗಳಿಗೂ ಹಿಂಸೆಯಾಗಬಾರದೆಂಬ ಎಚ್ಚರಿಕೆಯಲ್ಲಿ ಇರುವವರು ನಾವು. ಆದ್ದರಿಂದ ವಿಶ್ವದ ಯಾವುದೇ ಭಾಗದಲ್ಲಿ ಪ್ರಾಣಹಾನಿ, ವಸ್ತುಗಳ ನಷ್ಟವಾಗುತ್ತಿದ್ದಲ್ಲಿ ನಾವು ಕಳಕಳಿಯಿಂದ ಪ್ರಾರ್ಥನೆ ಮಾಡಬೇಕು. ಆಗ ನಾವು ವಿಶ್ವಮಾನವರಾಗುತ್ತೇವೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
PublicNext
02/03/2022 08:10 am