ಬೆಳ್ತಂಗಡಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಈ ದೇವಸ್ಥಾನವು ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ.
ಕ್ಷೇತ್ರದಲ್ಲಿ ಬ್ರಹ್ಮಲಿಂಗೇಶ್ವರ ಉಪದೇವರಾಗಿ ಸಾನ್ನಿಧ್ಯವಿದೆ. ಅಲ್ಲದೆ, ನಾಗಬ್ರಹ್ಮ, ರಕ್ತೇಶ್ವರಿ, ನಂದಿ, ಕ್ಷೇತ್ರಪಾಲರನ್ನು ಒಳಗೊಂಡ ಪಂಚಸಾನ್ನಿಧ್ಯವು ಇಲ್ಲಿದೆ. ಜತೆಗೆ ಸಿರಿಕುಮಾರ, ಅಬ್ಬಗ ದಾರಗ, ನಂದಿಗೋಣ ಮುಂತಾದ ಶಕ್ತಿಗಳು ಇಲ್ಲಿ ನೆಲೆಯಾಗಿವೆ.
ಮರೋಡಿ ದೇವಸ್ಥಾನವು ಸಾವಿರಾರು ಭಕ್ತರ ಆಲಡೆ ಕ್ಷೇತ್ರವಾಗಿದೆ. ಇಲ್ಲಿನ ನಡೆಯುವ ಸಿರಿಗಳ ಜಾತ್ರೆ ಮತ್ತು ಕುಮಾರದರ್ಶನ ವಿಶೇಷವಾಗಿದೆ.
ಸಿರಿ ಜಾತ್ರೆಯ ವಿಶೇಷತೆ ಏನು ಗೊತ್ತಾ?
ಹೌದು ತುಳುನಾಡಿನ ವಿಶಿಷ್ಟ ಹಾಗೂ ವಿಶೇಷ ಆರಾಧನೆ ಮತ್ತು ಆಚರಣೆಯ ರೂಪಕಾತ್ಮಕ ಸಂಪ್ರದಾಯದಲ್ಲಿ ಸಿರಿಜಾತ್ರೆಗೆ ಬಹಳ ಮಹತ್ವವಿದೆ. ತುಳುನಾಡಿನಲ್ಲಿ 70 ಕ್ಕಿಂತಲೂ ಅಧಿಕ ಆಲಡೆಗಳಿದ್ದು, ಸಾಮಾನ್ಯವಾಗಿ ಈ ಎಲ್ಲಾ ಆಲಡೆಗಳಲ್ಲಿ ಈ ಸಿರಿ ಜಾತ್ರೆಯು ಜನವರಿಯ ಹುಣ್ಣಿಮೆಯಿಂದ ಮೇ ತಿಂಗಳ ಹುಣ್ಣಿಮೆವರೆಗೆ ಬೇರೆಬೇರೆ ಸಂದರ್ಭಗಳಲ್ಲಿ ಆಚರಿಸಲ್ಪಡುತ್ತದೆ. ನಿರ್ದಿಷ್ಟವಾದ ದಿನದಂದು ಆಲಡೆಯಲ್ಲಿ ಸಿರಿಜಾತ್ರೆಯೆಂದರೆ ಅಂದು ಅಲ್ಲಿಗೆ ನೂರಾರು ಸಂಖ್ಯೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸ್ತ್ರೀಯರ ಮೇಲೆ ಸಿರಿ ಹಾಗೂ ಸಿರಿ ಪರಿವಾರದವರು ಪುರುಷರ ಮೇಲೆ ಕುಮಾರನು ಏಕಕಾಲದಲ್ಲಿ ಪ್ರಕಟಗೊಂಡು ಸಾಮೂಹಿಕ ದರ್ಶನಾವೇಶ ಮಾಡುತ್ತಾರೆ.
ಮೂಲ ಕುಮಾರ ಹಾಗೂ ಮೂಲ ಸಿರಿಗಳಿಗೆ ದೇವರ ಎದುರು ಮೊದಲು ಹಿಂಗಾರ ನೀಡಿ ಜೋಗದಿಂದ ಮಾಯದ ದರ್ಶನ ಆಗಬೇಕೆಂದು ಪ್ರಾರ್ಥನೆ ಮಾಡಲಾಗುತ್ತದೆ. ಮೊದಲು ಸಿರಿ, ಕುಮಾರರು ಪ್ರಕಟಗೊಂಡು ಆ ಬಳಿಕ ದಲಿಯದಲ್ಲಿರುವ ಇತರರ ಮೇಲೆ ಸಿರಿ ಹಾಗೂ ಇತರ ಬಳಗದವರ ದರ್ಶನಾವೇಶ ಆರಂಭವಾಗುತ್ತದೆ. ಆ ಬಳಿಕ ಎಲ್ಲರೂ ಹಿಂಗಾರ ಹಿಡಿದುಕೊಂಡು ಸಿರಿಸಂಧಿಯನ್ನು ನಿರ್ದಿಷ್ಟ ಧಾಟಿಯಲ್ಲಿ ಹಾಡಿಕೊಂಡು ರಾತ್ರಿಯಿಡೀ ಆಚರಿಸುವ ಒಂದು ವಿಶಿಷ್ಟ ಆಚರಣೆಯಾಗಿದೆ.
ಇಲ್ಲಿ ದಲಿಯದೊಳಗೆ ನಿಂತು ಸಿರಿ ಆವೇಶಗೊಳ್ಳುವ ಹೆಂಗಸರು ಬಿಳಿ ಸೀರೆ, ಬಿಳಿ ರವಕೆ ತೊಟ್ಟುಕೊಂಡರೆ, ಕುಮಾರ ಪಾತ್ರಿಗಳು ಕಚ್ಚೆಹಾಕಿ, ಕೆಂಪು ಪಟ್ಟೆ, ಸೊಂಟಕ್ಕೆ ಜಟ್ಟಿ ಸುತ್ತ ಕೊಳ್ಳುತ್ತಾರೆ. ಇಲ್ಲಿ ಗುಂಪು ಗುಂಪುಗಳು, ಜಾತಿ ಆಧಾರಿತವಾಗಿ ಪ್ರತ್ಯೇಕವಾಗಿಯೇ ದರ್ಶನಾವೇಶಕ್ಕೆ ನಿಲ್ಲುವ ಕ್ರಮವಿದೆ.
ರಾತ್ರಿಯಾಗುತ್ತಿದ್ದಂತೆ ಮೂಲ ಕುಮಾರ ದೇವಸ್ಥಾನದ ಒಳಗೆ ನಿಧಾನವಾಗಿ ದರ್ಶನಾವೇಶಕ್ಕೆ ಒಳಗಾಗಿ ಕ್ರಿಯೆ ಜೋರಾಗುತ್ತಿದ್ದಂತೆ ಹೊರಗೆ ನಿಂತಿರುವ ಕುಮಾರ ಹಾಗೂ ಅನುಭವಿ ಸಿರಿಗಳಿಗೆ ದರ್ಶನಾವೇಶ ಆರಂಭವಾಗುತ್ತದೆ. ಇವರ ಮಾರ್ಗದರ್ಶನ ಹಾಗೂ ನಿರ್ದೇಶನದಂತೆ ಉಳಿದ ಸಿರಿಗಳು, ಕುಮಾರರು ಆವೇಶಗೊಳ್ಳುತ್ತಾರೆ. ಈ ಕ್ರಿಯೆ ರಾತ್ರಿಯಿಡೀ ನಡೆಯುತ್ತದೆ.
Kshetra Samachara
22/01/2022 05:04 pm