ಧರ್ಮಸ್ಥಳ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ವಿವಿಧ ಬಗೆಯ ಹೂಗಳಿಂದ ನಯನ ಮನೋಹರವಾಗಿ ನಿನ್ನೆ ಸಿಂಗಾರಗೊಳಿಸಲಾಗಿತ್ತು.
ಶ್ರೀ ಮಂಜುನಾಥನ ಸನ್ನಿಧಿಯನ್ನು ಲಕ್ಷಲಕ್ಷ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ವಿವಿಧ ಜಾತಿಯ ಹೂವು, ಹಣ್ಣು ಮತ್ತು ಪ್ರಾಕೃತಿಕ ಎಲೆ ಬಳಸಲಾಗಿದ್ದು, ಸೊಬಗಿನ ಈ ಪುಷ್ಪಾಲಂಕಾರ ಲಕ್ಷಾಂತರ ಭಕ್ತರ ಮನಸೂರೆಗೊಳಿಸಿದೆ.
ಹೊಸ ವರ್ಷಾಚರಣೆ ಅಂಗವಾಗಿ ಬೆಂಗಳೂರಿನ ಭಕ್ತರು ಈ ಸೇವೆ ಮಾಡಿದ್ದು, ಇಡೀ ಧರ್ಮಸ್ಥಳ ದೇಗುಲವನ್ನೇ 'ಸುಮ ಲೋಕ'ದಲ್ಲಿ ಮಿಂದೇಳಿಸಿದ್ದಾರೆ.
ಬೆಂಗಳೂರಿನ ಚಂದ್ರ ಲೇಔಟ್‌ನಲ್ಲಿರುವ ಸಾಯಿ ಫ್ಲವರ್ ಡೆಕೋರೇಟರ್ಸ್‌ನ ಗೋಪಾಲ ರಾವ್, ಶ್ರವಣ ಮೂರ್ತಿ ಮತ್ತು ಆನಂದ್ ನೇತೃತ್ವದಲ್ಲಿ ಈ ಸೇವಾ ಕೈಂಕರ್ಯ ನಡೆದಿದೆ.
ಧರ್ಮಸ್ಥಳ ದೇವಸ್ಥಾನ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನಿವಾಸ, ನೆಲ್ಯಾಡಿ ಬೀಡು ಸೇರಿದಂತೆ ಧರ್ಮಸ್ಥಳದ ಪ್ರಮುಖ ಕಟ್ಟಡಗಳನ್ನೂ ಹೂವಿನಿಂದ ಅಲಂಕರಿಸಲಾಗಿದೆ.
PublicNext
01/01/2022 09:32 pm