ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಕರಾವಳಿ ಭೂ ಪ್ರದೇಶದ ಒಡೆಯ ನಾಗದೇವರು ಅನ್ನೋದು ಬಲವಾದ ನಂಬಿಕೆ. ಮನುಷ್ಯರನ್ನು ಬಾಧಿಸುವ ಪ್ರತಿಯೊಂದು ದೋಷಗಳಿಗೂ ನಾಗ ದೇವರೇ ಕಾರಣ ಅನ್ನೋದು ಇಲ್ಲಿನ ಜನರ ವಿಶ್ವಾಸ. ಹಾಗಾಗಿ ಬಗೆಬಗೆಯಲ್ಲಿ ನಾಗದೇವರ ಆರಾಧನೆ ನಡೆಸಲಾಗುತ್ತದೆ. ನಾಗಾರಾಧನೆಯ ಅತ್ಯುನ್ನತ ಆಚರಣೆ ಅಂದ್ರೆ ನಾಗಮಂಡಲ.
ಲೋಕಕಲ್ಯಾಣಾರ್ಥ ನಡೆಯುವ ನಾಗಮಂಡಲ ಹಲವು ವೈಶಿಷ್ಟ್ಯಗಳ ಆಗರ. ನಾಗದೇವರ ಮುಂದೆ ನಡೆಸುವ ನರ್ತನ ಸೇವೆ ನಾಗಮಂಡಲದ ವಿಶೇಷ. ಆವೇಶಭರಿತ ನಾಗಪಾತ್ರಿ ಮತ್ತು ನಾಗಕನ್ನಿಕೆ ವೇಷಧಾರಿಯ ನರ್ತನ ನಾಗಮಂಡಲದ ಪ್ರಧಾನ ಆಕರ್ಷಣೆ. ಉಡುಪಿಯ ಸಗ್ರಿ ಕ್ಷೇತ್ರದಲ್ಲಿ ನಾಗದೇವರ ಸನ್ನಿಧಾನದಲ್ಲಿ ನಡೆದ ಅಪರೂಪದ ಹಾಲಿಟ್ಟು ಸೇವೆ ಹಾಗೂ ಚತುರ್ಥು ಪವಿತ್ರ ಮಂಡಲ ಸೇವೆಯನ್ನು ಕಂಡು ಭಕ್ತರು ಪುನೀತರಾದರು.
ಜೀವಂತ ಜನಪದದ ಸಾಕ್ಷಿರೂಪ ಈ ಹಾಲಿಟ್ಟು ಸೇವೆ. ಪ್ರಾಕೃತಿಕ ಅಲಂಕಾರ, ಪಾಕೃತಿಕ ಬಣ್ಣದ ಮಂಡಲದ ನಡುವೆ ಮಧ್ಯರಾತ್ರಿಯಲ್ಲಿ ನಡೆಯುವ ಈ ದೇವರ ಸೇವೆಯನ್ನು ಕಾಣಲು ನೂರಾರು ಜನರು ಬರುತ್ತಾರೆ.ಪಾಕೃತಿಕ ಬಣ್ಣಗಳಿಂದ ರಚಿಸುವ ನಾಗಮಂಡಲವೆಂಬ ಮಹಾರಂಗವಲ್ಲಿಯ ರಚನೆಗೆ ಅನುಗುಣವಾಗಿಯೇ ದೇವರು ಕುಣಿಯುತ್ತಾರೆ. ನಾಗದೇವರ ಸಂಪ್ರೀತಿಗೆ ಈ ಕುಣಿತಸೇವೆ ನಡೆಸಲಾಗುತ್ತದೆ. ಪೂಜಾ ಪದ್ಧತಿಯ ಜೊತೆಗೆ ಪ್ರದರ್ಶನ ಕಲೆಯಾಗಿಯೂ ನಾಗಮಂಡಲ ಗಮನಸೆಳೆಯುತ್ತದೆ. ಕಂಚಿನ ಡಮರುಗ ಹಿಡಿದು ದೇವರನ್ನು ಕುಣಿಸುವ ನಾಗಕನ್ನಿಕೆ, ಮತ್ತು ಹಿಂಗಾರದ ಹೂವಿನ ರಾಶಿಯಲ್ಲಿ ಮಿಂದೇಳುವ ನಾಗಪಾತ್ರಿಯ ಆವೇಶ ಮೈ ನವಿರೇಳಿಸುವಂತಿರುತ್ತೆ.
ಇಷ್ಟೊಂದು ಅದ್ಧೂರಿ ಜನಪದ ಆಚರಣೆ ಬೇರೆಲ್ಲೂ ಕಾಣಸಿಗಲ್ಲ. ವೈದಿಕತೆಯ ಪ್ರಭಾವದಿಂದ ನಾಗಮಂಡಲದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಜನಸಾಮಾನ್ಯರು ಈ ಸೇವೆಯನ್ನು ನಡೆಸೋದು ಕಷ್ಟವೇ. ಲೋಕಕಲ್ಯಾಣಾರ್ಥ ಸಾಮೂಹಿಕ ಧನಸಂಗ್ರಹದ ಮೂಲಕ ಈಗಲೂ ಕರಾವಳಿಯಲ್ಲಿ ಈ ಅಪರೂಪದ ಆಚರಣೆ ನಡೆಸಲಾಗುತ್ತದೆ.
Kshetra Samachara
23/12/2021 06:44 pm