ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಮಾಪನಗೊಂಡಿತು. ಮುಂಜಾನೆ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿವಿಧಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಟ ಸಂಪ್ರದಾಯದಂತೆ ಇಳಿಸಲಾಯಿತು.
ಉತ್ಸವ ನಿಮಿತ್ತ ಬುಧವಾರ ದೇವಸ್ಥಾನದ ಹೊರಾಂಗಣ ಸುತ್ತಲೂ ಬೆಳಗ್ಗಿನಿಂದ ನೀರನ್ನು ಬಿಟ್ಟು ತುಂಬಿಸಲಾಯಿತು. ರಾತ್ರಿ ಮಹಾಪೂಜೆ ಬಳಿಕ ದೀಪಾರಾಧನೆ ಸಹಿತ ಪಾಲಕಿ ಉತ್ಸವ ನೀರಿನಲ್ಲಿ ಜರುಗಿತು. ಜಲದಲ್ಲಿ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ಕಣ್ಮನ ಸೆಳೆಯಿತು. ಇದರೊಂದಿಗೆ ಚಂಪಾ ಷಷ್ಠಿ ಉತ್ಸವಾದಿ ಮುಕ್ತಾಯಗೊಂಡಿತು.
ನೀರು ತುಂಬಿದ ದೇವಾಲಯದ ಹೊರಾಂಗಣದಲ್ಲಿ ಚಿಣ್ಣರು ಬಿದ್ದೇಳುತ್ತಾ, ಹೊರಳಾಡಿ ಸಂತಸ ಪಟ್ಟರು. ಮಕ್ಕಳೊಂದಿಗೆ ಹಿರಿಯರು ಕೂಡ ನೀರಾಟವಾಡಿ ಸಂಭ್ರಮಿಸಿದರು. ಜಾತ್ರೆ ಮುಕ್ತಾಯವಾಗಿರುವುದರಿಂದ ಇಂದಿನಿಂದ ಶ್ರೀ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಸೇವೆ ಪುನಾರಂಭಗೊಳ್ಳಲಿದೆ.
Kshetra Samachara
16/12/2021 10:13 am