ಉಡುಪಿ: ಉಡುಪಿ ಸುತ್ತಮುತ್ತಲಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಷಷ್ಠಿ ಪ್ರಯುಕ್ತ ಇಂದು ಎಡೆಸ್ನಾನ ನಡೆಯಿತು. ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದರು.
ಕುಕ್ಕಿಕಟ್ಟೆಯ ಮುಚ್ಲುಕೋಡು ದೇವಸ್ಥಾನದಲ್ಲಿ ಬೆಳಗ್ಗೆ ದೇವರ ಪೂಜೆ, ಪಲ್ಲಪೂಜೆ, ಪ್ರಧಾನ ಕಲಶಾಭಿಷೇಕ, ರಥ ಸಂಪ್ರೋಕ್ಷಣೆ, ರಥಾರೋಹಣ ನಡೆಯಿತು. ನಂತರ ದೇವಸ್ಥಾನದ ಒಳಗೆ ಬ್ರಾಹ್ಮಣರು ಮತ್ತು ಬ್ರಾಹ್ಮಣ ಸುಹಾಸಿನಿಯರಿಗೆ ಅನ್ನ ಸಂತರ್ಪಣೆ ನಡೆಯಿತು.
ಶ್ರೀ ಸುಬ್ರಹ್ಮಣ್ಯ ದೇವರಿಗೆ ಆರು ಮುಖ (ಷಣ್ಮುಖ) ಆಗಿರುವುದರಿಂದ ಆರು ಎಲೆಗಳಲ್ಲಿ ನೈವೇದ್ಯ ಹಾಗೂ ಅಷ್ಟ ದಿಕ್ಪಾಲಕರಿಗೆ ನೈವೇದ್ಯ ಸಮರ್ಪಿಸಲಾಗಿದ್ದು, ಈ ಎಲೆಗಳ ಮೇಲೆ ಭಕ್ತರು ಎಡೆಸ್ನಾನ ಮಾಡಿದರು. ಮಹಿಳೆಯರು ಸೇರಿದಂತೆ ಆರು ಮಂದಿ ಎಡೆಸ್ನಾನ ಸೇವೆಯಲ್ಲಿ ಪಾಲ್ಗೊಂಡರು.
ಉಳಿದಂತೆ ತಾಂಗೋಡು, ಮಾಂಗೊಡು, ಮುಚ್ಲುಕೋಡು ಸೇರಿದಂತೆ ಸುತ್ತಮುತ್ತಲ ಶ್ರೀ ಸುಬ್ರಹ್ಮಣ್ಯ, ಶ್ರೀ ವಾಸುಕಿ ದೇವಸ್ಥಾನಗಳಲ್ಲೂ ಷಷ್ಠಿ ಮಹೋತ್ಸವ, ಎಡೆಸ್ನಾನಾದಿ ಜರುಗಿತು.
Kshetra Samachara
09/12/2021 06:03 pm