ಸುಬ್ರಹ್ಮಣ್ಯ: ಸುಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ಸಂಭ್ರಮದ ವಾತಾವರಣ ಗರಿಗೆದರಿದೆ. ದೇಶದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬರುವ ಭಕ್ತರು ವಿವಿಧ ರೀತಿಯ ಸೇವೆಗಳನ್ನು ದೇವರಿಗೆ ಅರ್ಪಿಸುವುದು ಹಿಂದಿನಿಂದಲೂ ಬಂದ ವಾಡಿಕೆ. ಇದರಲ್ಲಿ ಅತಿ ಕಠಿಣ, ಫಲದಾಯಕ ಸೇವೆಯೇ ಬೀದಿ ಮಡೆಸ್ನಾನ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಹಿಂದಿ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಸಹಿತ ಪ್ರಮುಖ ರಾಜಕಾರಣಿಗಳು, ನಾನಾ ಕ್ಷೇತ್ರಗಳ ಹೆಸರಾಂತ ವ್ಯಕ್ತಿಗಳು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ, ಹರಕೆ ತೋರಿಸುತ್ತಾರೆ. ಉಳ್ಳವರು ಬೆಳ್ಳಿ- ಬಂಗಾರ ನೀಡಿದರೆ, ಇಲ್ಲದವರು ತಮ್ಮ ಶಕ್ತ್ಯಾನುಸಾರ ಕಾಣಿಕೆ ಸಮರ್ಪಿಸುತ್ತಾರೆ.
ಬೀದಿ ಮಡೆಸ್ನಾನವೆಂಬ ಬಲು ಕಠಿಣವಾದ ಉರುಳು ಸೇವೆ ಶ್ರೀ ಕ್ಷೇತ್ರದಲ್ಲಿ ಅರ್ಪಣೆಯಾಗುವ ಮಹಾಸೇವೆ. ಚಂಪಾ ಷಷ್ಠಿ ಜಾತ್ರೆ ಸಂದರ್ಭ ಭಕ್ತರು ಅಧಿಕ ಸಂಖ್ಯೆಯಲ್ಲಿ ಈ ಸೇವಾ ಕೈಂಕರ್ಯದಿಂದ ಕೃತಾರ್ಥರಾಗುತ್ತಾರೆ. ಶ್ರೀಕ್ಷೇತ್ರದಿಂದ 2.5 ಕಿ.ಮೀ. ದೂರದಲ್ಲಿರುವ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ, ಬೀದಿಯಲ್ಲಿಉರುಳು ಸೇವೆ ಮಾಡುವುದು ಇಲ್ಲಿನ ಭಕ್ತಿ ವಿಶೇಷತೆ.
Kshetra Samachara
04/12/2021 04:58 pm