ಕೋಟ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಡಿ ಹಬ್ಬ ಎಂದರೆ ಹಲವು ನಂಬಿಕೆಗಳ ಪ್ರತೀಕ. ಮದುವೆಯಾಗದವರಿಗೆ ಶ್ರೀ ಕೋಟಿಲಿಂಗೇಶ್ವರ ಅಭಯ ನೀಡುವ ದೇವರು. ನವದಂಪತಿಗೆ ಸುಖ ದಾಂಪತ್ಯದ ಕನಸು ಕಟ್ಟಿಕೊಡುವ ತಾಣ. ಇಲ್ಲಿನ ರಥೋತ್ಸವ ಅದ್ಧೂರಿತನಕ್ಕೆ ಇನ್ನೊಂದು ಹೆಸರು.
ಹೊಸದಾಗಿ ಮದುವೆಯಾದವರಿಗೆ ತಮ್ಮ ಸುಖ ದಾಂಪತ್ಯದ ಬಗ್ಗೆ ಸಾವಿರ ಕನಸುಗಳಿರುತ್ತವೆ. ಈ ದೇವರ ಸನ್ನಿಧಿಯಲ್ಲಿ ದಾಂಪತ್ಯಗೀತೆ ಆರಂಭವಾದರೆ ಪೂರ್ಣ ಜೀವನ ಸುಖವಾಗಿರುತ್ತೆ ಅನ್ನೋದು ವಿಶ್ವಾಸ. ಹಾಗಂತಲೇ ಸಾವಿರ ಸಾವಿರ ಮಂದಿ ಶ್ರೀ ಕೋಟಿಲಿಂಗೇಶ್ವರ ದರ್ಶನಕ್ಕೆ ಬರುತ್ತಾರೆ. ಕರಾವಳಿ- ಮಲೆನಾಡು ಭಾಗದ ಅತಿ ದೊಡ್ಡ ಜಾತ್ರೆ ಅಂದ್ರೆ ಕೊಡಿ ಹಬ್ಬ. ಏಳು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಮೊದಲ ದಿನ ನವದಂಪತಿಗಳ ಜಾತ್ರೆ ನಡೆಯುತ್ತದೆ. ದಂಪತಿ ಕೈ ಕೈಹಿಡಿದು ಬಂದು, ಮನದಲ್ಲಿ ನೂರು ಹರಕೆ ಹೊತ್ತು ದೇವರಿಗೆ ಕೈ ಮುಗಿಯುತ್ತಾರೆ. ಪುಷ್ಕರಣಿಗೆ ಪ್ರದಕ್ಷಿಣೆ ಬಂದು ಸುತ್ತಲೂ ಅಕ್ಕಿ ಚೆಲ್ಲಿ ಹರಕೆ ತೀರಿಸುತ್ತಾರೆ.
ಜಾತ್ರೆಗೆ ಬಂದವರೆಲ್ಲ ಕಬ್ಬಿನ ಜಲ್ಲೆ ತೆಗೆದುಕೊಂಡು ಹೋಗೋದು ಪದ್ಧತಿ. ಕಬ್ಬಿನ ಕೊಡಿ ಕೊಂಡೊಯ್ಯುವುದರಿಂದ ಕೊಡಿ ಹಬ್ಬ ಎಂದು ಹೆಸರಾಯಿತು. ಬೃಹತ್ ಗಾತ್ರದ ಬ್ರಹ್ಮರಥವನ್ನು ಭಕ್ತರೆಲ್ಲ ಸೇರಿ ಎಳೆಯುತ್ತಾರೆ. ಇಲ್ಲಿ ಶಿವ ದೇವರು ಕೋಟಿಲಿಂಗ ಸ್ವರೂಪದಲ್ಲಿ ನೆಲೆ ನಿಂತಿದ್ದಾರೆ ಅನ್ನೋದು ನಂಬಿಕೆ. ಗ್ರಾಮೀಣ ಜನರು ಕೊಡಿ ಹಬ್ಬಕ್ಕಾಗಿ ವರ್ಷವೆಲ್ಲ ಕಾದು, ಏಳು ದಿನಗಳ ಜಾತ್ರೆಯಲ್ಲಿ ನಿತ್ಯವೂ ಪಾಲ್ಗೊಂಡು ಸಂಭ್ರಮಿಸ್ತಾರೆ.
Kshetra Samachara
20/11/2021 10:46 am