ವರದಿ: ರಹೀಂ ಉಜಿರೆ
ಪರ್ಕಳ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ದೀಪಾವಳಿಯನ್ನು ಜನಪದ ಆಚರಣೆಗಳೊಂದಿಗೆ ಸಂಭ್ರಮಿಸುವುದು ವಿಶೇಷ. ತುಳುನಾಡು ಎಂದು ಕರೆಯಲಾಗುತ್ತಿದ್ದ ಈ ಭೂಪ್ರದೇಶವನ್ನು, ಬಲಿಚಕ್ರವರ್ತಿ ಆಳುತ್ತಿದ್ದ ಅನ್ನುವ ಪ್ರತೀತಿ ಇದೆ. ಹಾಗಾಗಿ ಗದ್ದೆಗಳಲ್ಲಿ ಬಲೀಂದ್ರನಿಗೆ ದೀಪವಿಟ್ಟು ನಡೆಸುವ ಜನಪದ ಆಚರಣೆಗೆ ಇಲ್ಲಿ ಮಹತ್ವ.
ದೇಶಾದ್ಯಂತ ಜನರು ಸಂಭ್ರಮದಿಂದ ಆಚರಿಸುವ ಹಬ್ಬ ದೀಪಾವಳಿ. ವೈದಿಕ ಪೂಜೆ- ಆಚರಣೆಗಳು ಒಂದುಕಡೆಯಾದರೆ, ಜನಪದರು ಆಚರಿಸುವ ದೀಪಾವಳಿಗೆ ಪಾರಂಪರಿಕ ಮೆರುಗು ಇದೆ. ದೀಪಾವಳಿಯ ಸಂದರ್ಭದಲ್ಲಿ ತುಳು ಜನಪದರು ತಮ್ಮ ಪಿತೃಗಳನ್ನು ನೆನೆಯುತ್ತಾರೆ. ದೀಪಾವಳಿಯ ಮೊದಲ ದಿನವನ್ನು ಸತ್ತವರ ಹಬ್ಬ ಎಂದೇ ಆಚರಿಸುವುದು ವಿಶೇಷ. ಹಿರಿಯ ಮೂರು- ನಾಲ್ಕು ತಲೆಮಾರುಗಳ ಪಿತೃಗಳನ್ನು ಸ್ಮರಿಸಿ, ಅವರಿಗೆ ಊಟ ಬಡಿಸಿ ಇಟ್ಟು, ಅವರು ತೊಡುತ್ತಿದ್ದ ಉಡುಗೆಗಳನ್ನು ತಂದು ಪೂಜಿಸುವುದು ಪದ್ಧತಿ. ಉಡುಪಿ ಜಿಲ್ಲೆಯಲ್ಲಿ ನಡೆಯುವ ಬಲೀಂದ್ರ ಪೂಜೆ ಬಹಳ ವಿಶೇಷ. ಮನೆಯ ಗಂಡಸರೆಲ್ಲ ಗದ್ದೆಗೆ ತೆರಳಿ ದೀಪವಿಟ್ಟು, ಬಲಿ ಚಕ್ರವರ್ತಿಯನ್ನು ಕೂಗಿ ಕರೆಯುವುದು ಪದ್ಧತಿ. ಬಲೀಂದ್ರ ಚಕ್ರವರ್ತಿಯು ತುಳುನಾಡನ್ನು ಆಳುತ್ತಿದ್ದ ಅರಸನಾಗಿದ್ದ ಬಲಿಯನ್ನು ವರ್ಷಕ್ಕೊಮ್ಮೆ ಈ ರೀತಿಯಲ್ಲಿ ಗೌರವಿಸುವ ಸಂಪ್ರದಾಯ ಇದೆ.
ಆಧುನಿಕ ದೀಪಾವಳಿಯಲ್ಲಿ ಪಟಾಕಿಗಳ ಭರಾಟೆ ಇದ್ದರೆ, ಕರಾವಳಿ ಜಿಲ್ಲೆಗಳಲ್ಲಿ ಈಗಲೂ ಸಾಂಪ್ರದಾಯಿಕ ರೀತಿಯ ಪಟಾಕಿಗಳನ್ನು ಬಿಡಲಾಗುತ್ತದೆ. ಬಿದಿರು ಅಥವಾ ಪೈಪುಗಳನ್ನು ಬಳಸಿ ಪ್ರಕೃತಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಹೊಗೆರಹಿತ ಪಟಾಕಿಗಳನ್ನು ಬಿಟ್ಟು ಈಗಲೂ ಜನ ಸಂಭ್ರಮಿಸುತ್ತಾರೆ. ಹೇಳಿಕೇಳಿ ಕರಾವಳಿ ಜಿಲ್ಲೆಯ ಜನರು ತವರು ಜಿಲ್ಲೆಯನ್ನು ಬಿಟ್ಟ ದೇಶದ ನಾನಾ ಭಾಗಗಳಿಗೆ ಹೋಗಿದ್ದಾರೆ. ವಿದೇಶಗಳಲ್ಲೂ ಕೋಟ್ಯಂತರ ಜನ ನೆಲೆಸಿದ್ದಾರೆ. ಎಲ್ಲೇ ಹೋಗಿದ್ದರೂ ದೀಪಾವಳಿಯ ಸಂದರ್ಭದಲ್ಲಿ ತವರಿಗೆ ಬಂದು ಅಗಲಿದ ಹಿರಿಯರನ್ನು ಪೂಜಿಸುವ ಪದ್ಧತಿ ಈಗಲೂ ಇದೆ. ಕೂಡುಕುಟುಂಬದ ಮನೆಗಳಲ್ಲಿ ಎಲ್ಲರೂ ಸೇರಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿ ಖುಷಿಪಡುತ್ತಾರೆ.
ಕಾಲ ಬದಲಾದರೂ ಕರಾವಳಿಯ ದೀಪಾವಳಿ ಆಚರಣೆಗಳು ಬದಲಾಗಿಲ್ಲ. ಇವತ್ತಿಗೂ ಮೂಲ ಪದ್ಧತಿಯಂತೆಯೇ ಹಬ್ಬಗಳನ್ನು ಆಚರಿಸುವುದು ಕರಾವಳಿಗರ ವಿಶೇಷ.
Kshetra Samachara
05/11/2021 10:34 pm