ಉಡುಪಿ: ಉಡುಪಿಯಲ್ಲಿಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗೋಪಾಲನಿಗೆ ಲಕ್ಷ ತುಳಸಿ ಅರ್ಚನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಠದಲ್ಲಿ ಸಂಪ್ರದಾಯ ಬದ್ದವಾಗಿ ನಡೆದವು. ಪ್ರತಿ ವರ್ಷ ಅಷ್ಟಮಿಯನ್ನು ಪೊಡವಿಗೊಡೆಯ ಕೃಷ್ಣನೂರು ಉಡುಪಿಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ತಾಸೆಯ ಸದ್ದು, ಹುಲಿ ಕುಣಿತದ ಸಡಗರ ವಿವಿಧ ವೇಷಗಳ ಸಂಭ್ರಮ ಮೇಳೈಸುತ್ತದೆ. ಆದರೆ ಈ ಬಾರಿ ಕೋವಿಡ್ ಕಾರಣದಿಂದ ಅದ್ದೂರಿಯಾಗಿ ಆಚರಣೆ ಇರಲಿಲ್ಲ, ಬದಲಾಗಿ ಅಷ್ಟಮಿ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ, ಸರಳವಾಗಿ ಆಚರಣೆ ನಡೆಯುತ್ತಿದೆ. ಬೆಳಿಗ್ಗೆ ಮಹಾಪೂಜೆಯ ಮೊದಲು ಶ್ರೀಕೃಷ್ಣ ದೇವರಿಗೆ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ವಿಶೇಷವಾಗಿ ಲಕ್ಷ ತುಳಸಿ ಅರ್ಚನೆ ನಡೆಸಿದರು.ಭಕ್ತರು ಸೀಮಿತ ಸಂಖ್ಯೆಯಲ್ಲಿ ಕಂಡುಬಂದರು.
ಭಕ್ತರಿಗೆ ಇವತ್ತು ಬೆಳಗ್ಗಿನಿಂದಲೇ ಕೃಷ್ಣ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ರಾತ್ರಿ 12. 17ಕ್ಕೆ ಸರಿಯಾಗಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರಧಾನ ನಡೆಯಲಿದೆ. ಚಂದ್ರಶಾಲೆ, ಮಧ್ವ ಮಂಟಪ, ಕನಕಗೋಪುರ ಬಳಿ ಅರ್ಘ್ಯ ಪ್ರಧಾನಕ್ಕೆ ವ್ಯವಸ್ಥೆ ಇದೆ. ಭಕ್ತರಿಗೆ ವಿತರಣೆ ಮಾಡಲು 40 ಸಾವಿರ ಅಕ್ಕಿಯ ಚಕ್ಕುಲಿ ಹಾಗೂ 80 ಸಾವಿರ ವಿವಿಧ ಬಗೆಯ ಉಂಡೆಗಳು ರೆಡಿಯಾಗಿವೆ.ಉಡುಪಿ ಸೇರಿದಂತೆ ನಾಡಿನ ಹಲವು ಕಡೆಗಳಿಂದ ಕೃಷ್ಣನ ಭಕ್ತರು ಆಗಮಿಸಿ, ಕೃಷ್ಣ ದರ್ಶನ ಪಡೆದು ಪುನೀತರಾದರು. ಮಠದ ರಥಬೀದಿಯಲ್ಲೂ ಹೆಚ್ಚಿನ ಜನ ದಟ್ಟನೆ ಕಂಡು ಬರಲಿಲ್ಲ.
ಅಷ್ಠಮಿ ಪ್ರಯುಕ್ತ ನಾಳೆ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಗೊಲ್ಲ ವೇಷದಾರಿಗಳು ಮಡಕೆ ಒಡೆಯುವ ಸಂಪ್ರದಾಯವನ್ನು ಮಾಡಲಿದ್ದಾರೆ. ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ರಥಬೀದಿಯಲ್ಲಿ ಉತ್ಸವ ಮಾಡಲಾಗುತ್ತದೆ.
Kshetra Samachara
30/08/2021 05:49 pm