ಕಾಪು : ತಾಲೂಕಿನ ಎಲ್ಲೂರು ಶ್ರೀ ಮಹಾತೋಭಾರ ವಿಶ್ವೇಶ್ವರ ದೇವಾಲಯದಲ್ಲಿ ಕ್ರಿ.ಶ 1509 ರ ಕೃಷ್ಣದೇವರಾಯನ ಶಾಸನವು ದೇವಾಲಯ ಜೀರ್ಣೋದ್ಧಾರದ ಸಂದರ್ಭದಲ್ಲಿ ಪತ್ತೆಯಾಗಿರುತ್ತದೆ. ಈ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕ ಪ್ರೋ. ಎಸ್. ಎ. ಕೃಷ್ಣಯ್ಯ ಇವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿರುತ್ತಾರೆ.
ಕಣ ಶಿಲೆ (ಗ್ರಾನೈಟ್) ಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನದಲ್ಲಿ 12 ಸಾಲುಗಳಿದ್ದು 2 ಅಡಿ ಎತ್ತರ ಮತ್ತು ಅಗಲವನ್ನು ಹೊಂದಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ ನಂತರದಲ್ಲಿ ನಂದಿ, ನಂದಾದೀಪಗಳು, ಶಿವಲಿಂಗ, ರಾಜಕತ್ತಿ ಹಾಗೂ ಪುಷ್ಪದ ಕೆತ್ತನೆಯಿದೆ. ಶಾಸನದಲ್ಲಿ ಶಾಲಿವಾಹನ ಶಕವರುಷ 1434 ನಂದನದ ವರ್ತಮಾನ ಸಂವತ್ಸರದ ಜೇಷ್ಠ ಬ 2 ಮಂಗಳವಾರ ಎಂದು ಉಲ್ಲೇಖವಿದೆ. ಈ ಶಾಸನವನ್ನು ಕೃಷ್ಣರಾಯರ ನಿರೂಪದಿಂದ ಮಂಗಲೂರು ಬಾರಕೂರ ರತ್ನಪ್ಪ ಒಡೆಯ ಆಳುವನ ತಿರುಮಲರಾಯ ಚೌಟರು ಮತ್ತು ತಿರುಮಲರಸರಾದ ಕಿಂನಿಕ ಹೆಗಡೆಯವರು ದೇವರಾಡಿಯ ಕುಂದ ಹೆಗ್ಗಡೆಗೆ ಎಲ್ಲೂರ ಶ್ರೀ ವಿಶ್ವನಾಥ ದೇವರ ಸನ್ನಿಧಿಯಲ್ಲಿ ಬರೆಸಿಕೊಟ್ಟದ್ದಾಗಿದೆ. ಶಾಸನದಲ್ಲಿ ತಿಮ್ಮಯ್ಯ ದಂಡನಾಯಕ ಹಾಗೂ ಪುತ್ತಿಗೆ, ಐಕಳ ಮತ್ತು ಎಲ್ಲೂರು ಪ್ರದೇಶಗಳ ಉಲ್ಲೇಖವಿದೆ.
ಕ್ಷೇತ್ರಕಾರ್ಯ ಶೋಧನೆಯಲ್ಲಿ ಕೆ.ಎಲ್. ಕುಂಡಂತಾಯ, ರವಿ ಆಳ್ವ ಬಿಳಿಯಾರು, ಗೌತಮ್ ಕಾಮತ್ ಮೂಡುಬೆಳ್ಳೆ ಅವರು ಸಹಕರಿಸಿರುತ್ತಾರೆ.
Kshetra Samachara
03/08/2021 07:06 pm