ಉಡುಪಿ : ಉಡುಪಿ ಸುಪ್ರಸಿದ್ಧ ಶ್ರೀಕೃಷ್ಣಮಠದಲ್ಲಿ 2022 ಜನವರಿ 18ರಂದು ಶ್ರೀಕೃಷ್ಣ ಮಠದ ಪೂಜಾಧಿಕಾರ ಬದಲಾವಣೆ ಪರ್ಯಾಯ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನಲೆಯಲ್ಲಿ ಪರ್ಯಾಯ ಪೀಠ ಏರಲಿರುವ ಕೃಷ್ಣಾಪುರ ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ನಾಲ್ಕನೆಯ ಪರ್ಯಾಯ ಪೂರ್ವಭಾವಿ ಎರಡನೆಯ ಮುಹೂರ್ತವಾದ ಅಕ್ಕಿ ಮುಹೂರ್ತವು ಕೃಷ್ಣಾಪುರ ಮಠದಲ್ಲಿ ಸಂಪನ್ನಗೊಂಡಿತು.
ಉಡುಪಿ ಎಂದಾಕ್ಷಣ ನೆನಪಿಗೆ ಬರುವುದೆ ಶ್ರೀಕೃಷ್ಣ ಮಠಗಳು. ಇಲ್ಲಿನ ಅಷ್ಟ ಮಠಗಳು ಎರಡು ವರ್ಷಕ್ಕೆ ಒಮ್ಮೆ ಶ್ರೀಕೃಷ್ಣನ ಪೂಜಾ ಕೈಂಕರ್ಯ ವಹಿಸಿಕೊಳ್ಳುವ, ಅಧಿಕಾರ ಹಸ್ತಾಂತರ ಕಾರ್ಯಕ್ರಮವೆ ಪರ್ಯಾಯ ಮಹೋತ್ಸವ. ಪರ್ಯಾಯ ಮಹೋತ್ಸವಕ್ಕೆ ರಾಜ್ಯ ದೇಶ ವಿದೇಶಗಳಿಂದ ಭಕ್ತ ವೃಂದ ಹರಿದು ಬರುತ್ತದೆ. ಈ ಹಿನ್ನಲೆಯಲ್ಲಿ ಒಂದು ವರ್ಷದಿಂದಲೇ ಪೂರ್ವಭಾವಿ ಪರ್ಯಾಯ ತಯಾರಿ ಕಾರ್ಯಗಳನ್ನು ನಡೆಸಲಾಗುತ್ತದೆ. ಪರ್ಯಾಯಕ್ಕೆ ಭಕ್ತಗಳ ಊಟೋಪಚಾರಕ್ಕೆ ಬೇಕಾಗಿ ಅಕ್ಕಿ ಅಗತ್ಯತೆ ಅತೀ ಅಗತ್ಯವಾಗಿರುತ್ತದೆ. ಆದ್ದರಿಂದ ಈ ಸಿದ್ಧತೆಗೆ ಚಾಲನೆ ನೀಡುವ ಅಕ್ಕಿ ಮಹೂರ್ತ ಕಾರ್ಯಕ್ರಮವು ಮುಂದಿನ ಪರ್ಯಾಯ ಪೀಠ ಏರಲಿರುವ ಕೃಷ್ಣಾಪುರ ಮಠದಲ್ಲಿ ನಡೆಯಿತು.
ಅಕ್ಕಿ ಮಹೂರ್ತದ ಅಂಗವಾಗಿ ಬೆಳಗ್ಗೆ ಕೃಷ್ಣಾಪುರ ಮಠದಲ್ಲಿ ಪಟ್ಟದ ದೇವರಾದ ಕಾಳೀಯಮರ್ದನ ಕೃಷ್ಣ ಮತ್ತು ನರಸಿಂಹ ದೇವರ ಪೂಜೆಯ ಅನಂತರ ನವಗ್ರಹ ಪೂಜೆ ನಡೆಯಿತು. ಪ್ರಾರ್ಥನೆ ನಡೆದ ಬಳಿಕ ಅಕ್ಕಿ ಮುಡಿಯನ್ನು ಸುವರ್ಣ ಪಾಲಕಿಯಲ್ಲಿರಿಸಿಕೊಂಡು ಚಂದ್ರಮೌಳೀಶ್ವರ, ಅನಂತೇಶ್ವರ ದೇವಸ್ಥಾನ, ಕೃಷ್ಣಮಠಕ್ಕೆ ತೆರಳಿ ಪ್ರಾರ್ಥನೆ ನಡೆಸಿದ ಬಳಿಕ ಕೃಷ್ಣಾಪುರ ಮಠಕ್ಕೆ ಮೆರವಣಿಗೆಯಲ್ಲಿ ಬಂದು ಚಿನ್ನದ ಮಂಟಪದಲ್ಲಿರಿಸಿ ಪೂಜಿಸಿ ಅಕ್ಕಿ ಮುಹೂರ್ತ ನಡೆಸಲಾಯಿತು. ಬಳಿಕ ಪರ್ಯಾಯ ಅದಮಾರು, ಪೇಜಾವರ, ಸೋದೆ, ಕಾಣಿಯೂರು, ಪಲಿಮಾರು ಹಿರಿಯ, ಕಿರಿಯ ಶ್ರೀಪಾದರು ಆಗಮಿಸಿ ಕೃಷ್ಣಾಪುರ ಮಠದಿಂದ ಗೌರವವನ್ನು ಸ್ವೀಕರಿಸಿದರು.
ಅಷ್ಟಮಠಗಳ ನಡುವೆ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯಕಾರ್ಯಕ್ರಮದ ಸಿದ್ಧತೆ ಜೋರಾಗಿಯೇ ನಡಿತಾ ಇದೆ. ಈಗಾಗಲೆ ಇದರ ಪೂರ್ವಭಾವಿಯಾಗಿ ಬಾಳಿ ಮತ್ತು ಅಕ್ಕಿ ಮುಹೂರ್ತಗಳು ನಡೆದಿವೆ, ಇನ್ನು ಕಟ್ಟಿಗೆ ಮತ್ತು ಧಾನ್ಯ ಮುಹೂರ್ತಗಳು ನಡೆಯಬೇಕಿದೆ.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
18/02/2021 11:36 am