ಮಂಗಳೂರು: ಇಡೀ ಜಗತ್ತಿನಲ್ಲಿ ಹುಟ್ಟು- ಸಾವು ಇಲ್ಲದ ಏಕೈಕ ಧರ್ಮ ವೆಂದರೆ ಅದು ಹಿಂದೂ ಧರ್ಮ. ಆದರೆ, 800 ವರ್ಷಗಳ ಇತ್ತೀಚೆಗೆ ಹುಟ್ಟಿರುವ ಮತಗಳಿಗೆ ಹುಟ್ಟೂ ಇದೆ, ಸಾವೂ ಇದೆ ಎಂದು ನೆನಪು ಮಾಡಬೇಕಾದ ದಿನಗಳು ಹತ್ತಿರ ಬರುತ್ತಿದ್ದು, ಅದಕ್ಕಾಗಿ ನಾವೆಲ್ಲ ಜಾಗೃತಿಯಾಗಬೇಕಾದ ಅನಿವಾರ್ಯತೆ ಇದೆ ಎಂದು ಬಜರಂಗದಳದ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಹೇಳಿದರು.
ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ಮುಂಭಾಗ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬೋಳಾರ ಪ್ರಖಂಡದ ವತಿಯಿಂದ ನಡೆದ ಹಿಂದೂ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದೂ ಧರ್ಮದ ಮೇಲೆ, ದೇಶದ ಧಾರ್ಮಿಕ ನಂಬಿಕೆಯ ಸುಮಾರು 800 ವರ್ಷಗಳಿಂದಲೂ ಆಕ್ರಮಣಗಳು, ಅನಾಚಾರಗಳು ನಡೆಯುತ್ತಲೇ ಬರುತ್ತಿದೆ. ನಮ್ಮ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಕುಕಾರ್ಯ ನಡೆಯುತ್ತಿದೆ. ಇನ್ನೂ ಇದನ್ನು ಸಹಿಸಲಸಾಧ್ಯ. ಇನ್ನು ಮುಂದೆಯೂ ಇದೇ ರೀತಿಯಲ್ಲಿ ಹೇಡಿತನದ ದಾಳಿಗಳು ನಡೆದಲ್ಲಿ ಹಿಂದೂ ಯುವಕರು ಬೀದಿಗೆ ಇಳಿಯಲಿದ್ದಾರೆ ಎಂದರು.
ಮಂಗಳೂರಿನ ಸಿಎಎ ಪ್ರತಿಭಟನೆ, ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆಯಿಂದ ದೇಶದಲ್ಲಿ ಭಯೋತ್ಪಾದನೆಗೆ ಯಾವ ರೀತಿ ಸಿದ್ಧತೆ ನಡೆಯುತ್ತಿದೆ ಎಂದು ತಿಳಿದು ಬರುತ್ತದೆ. ಗೋಡೆಗಳಲ್ಲಿ ಉಗ್ರರ ಪರವಾಗಿ ಬರಹಗಳನ್ನು ಬರೆದು ಎಚ್ಚರಿಕೆ ನೀಡಲಾಗುತ್ತಿದೆ.
ದೇಶದ ಮೇಲೆ, ಹಿಂದೂ ಧರ್ಮದ ಮೇಲೆ 800 ವರ್ಷಗಳಿಂದಲೂ ಆಕ್ರಮಣ ನಡೆಯುತ್ತಿರುವುದರ ಬಗ್ಗೆ ಗೋಡೆ ಬರಹ ಬರೆದವರು ನೆನಪು ಮಾಡಬೇಕೆಂದಿಲ್ಲ. ಯಾರಾದರೂ ಬೇರೆ ಬೇರೆ ತಂತ್ರಗಳ ಮೂಲಕ ಹಿಂದೂ ಧರ್ಮವನ್ನು ಅಲ್ಲಾಡಿಸಬಹುದೆಂದು ಅಂದುಕೊಂಡಲ್ಲಿ ಸರಿಯಾಗಿ ನೆನಪಿಟ್ಟುಕೊಳ್ಳಿ... ಹಿಂದೂ ಧರ್ಮ ಯಾರ ಅಲ್ಲಾಡಿಸುವಿಕೆಗೆ ಬಗ್ಗುವ ಧರ್ಮವಲ್ಲ ಎಂದು ಮುರಳೀಕೃಷ್ಣ ಎಚ್ಚರಿಸಿದರು.
Kshetra Samachara
15/02/2021 11:19 am